ಐಪಿಎಲ್ ಆಟಗಾರರ ಮೆಗಾಹರಾಜು ಮುಗಿದಿದೆ. 590 ಆಟಗಾರರ ಪೈಕಿ 204 ಆಟಗಾರರು ವಿವಿಧ ಫ್ರಾಂಚೈಸೀಗಳನ್ನು ಸೇರಿದ್ದಾರೆ. 386 ಆಟಗಾರರು ಯಾವ ಫ್ರಾಂಚೈಸಿಗೂ ಇಷ್ಟವಾಗದೆ ಅನ್ ಸೋಲ್ಡ್ ಆಗಿದ್ದಾರೆ. ಹರಾಜು ಟೇಬಲ್ನಲ್ಲಿ ಹೆಸರು ಬಂದಿದ್ದಷ್ಟೇ ಇವರಿಗೆ ಖುಷಿ.
10 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರ ಮೇಲೆ ಕೋಟಿ ಕೋಟಿ ಹಣ ಸುರಿದಿವೆ. ಇಶನ್ ಕಿಶಾನ್ 15.25 ಕೋಟಿ ರೂಪಾಯಿ ಜೇಬಿಗಿಳಿಸಿಕೊಂಡಿದ್ದಾರೆ. ದೀಪಕ್ ಚಹರ್, ಶಾರ್ದೂಲ್, ಪ್ರಸಿಧ್ ಕೃಷ್ಣ ಲಿವಿಂಗ್ ಸ್ಟೋನ್ ರಂತಹ ಆಟಗಾರರು ಎಲ್ಲಾ ಫ್ರಾಂಚೈಸಿಗೆ ಇಷ್ಟವಾದ ಕಾರಣ ಸಖತ್ ದುಡ್ಡು ಜೇಬಿಗಿಳಿಸಿಕೊಂಡಿದ್ದಾರೆ. ಆದರೆ ಹಲವು ಸ್ಟಾರ್ ಆಟಗಾರರು ಯಾರಿಗೂ ಬೇಡವಾಗದೆ ಅನ್ ಸೋಲ್ಡ್ ಲಿಸ್ಟ್ ಸೇರಿಕೊಂಡಿದ್ದಾರೆ.
ಮಿಸ್ಟರ್ ಐಪಿಎಲ್ ಎಂದೇ ಖ್ಯಾತಿ ಪಡೆದಿರುವ ಸುರೇಶ್ ರೈನಾ ಈ ಬಾರಿ ಹರಾಜಾಗದೆ ಉಳಿದಿದ್ದಾರೆ. ಚಿನ್ನ ತಲಾ ಖ್ಯಾತಿಯ ರೈನಾ 2 ಬಾರಿ ಆಕ್ಷನ್ ಟೇಬಲ್ಗೆ ಬಂದರೂ ಯಾರೂ ಖರೀದಿ ಮಾಡುವ ಮನಸ್ಸು ಮಾಡಲಿಲ್ಲ. ಟಿ20 ಕ್ರಿಕೆಟ್ನ ಸ್ಟಾರ್ ಬ್ಯಾಟರ್ ಡೇವಿಡ್ ಮಲನ್, ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್, ಆಸ್ಟ್ರೇಲಿಯಾ ನಾಯಕ ಆ್ಯರೋನ್ ಫಿಂಚ್ ಸೇರಿದಂತೆ ಕೆಲವು ಹೆಸರಾಂತ ಆಟಗಾರರನ್ನು ಯಾವುದೇ ಫ್ರಾಂಚೈಸಿಗಳು ಖರೀದಿಸದಿರುವುದು ಅಚ್ಚರಿಗೆ ಕಾರಣವಾಗಿದೆ.
ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರ ಸ್ಟೀವ್ ಸ್ಮಿತ್ ಕೂಡ ಹರಾಜಾಗದೆ ಉಳಿದ ಆಟಗಾರರ ಪಟ್ಟಿಯಲ್ಲಿದ್ದಾರೆ. ಮಾರ್ನಸ್ ಲಬುಶಂಗೆ, ಚೇತೇಶ್ವರ ಪೂಜಾರಾ, ಇಶಾಂತ್ ಶರ್ಮಾ ಕೂಡ ಫ್ರಾಂಚೈಸಿಗಳ ಮನ ಗೆಲ್ಲಲು ವಿಫಲರಾಗಿದ್ದಾರೆ.
ಶಕೀಬ್ ಅಲ್ ಹಸನ್, ಅಮಿತ್ ಮಿಶ್ರಾ, ಆಡಂ ಜಂಪಾ, ಇಮ್ರಾನ್ ತಾಹೀರ್, ಉಸ್ಮಾನ್ ಖ್ವಾಜಾ, ಕೇದಾರ್ ಜಾಧವ್, ಮಾರ್ಟಿನ್ ಗಪ್ಟಿಲ್, ಕಾರ್ಲೊಸ್ ಬ್ರೇಥ್ವೇಟ್, ಹೀಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರು ಕೂಡ ಫ್ರಾಂಚೈಸಿ ಆಟದಲ್ಲಿ ಹಿಂದೆ ಬಿದ್ದಿದ್ದಾರೆ. ಕೆಲವು ಆಟಗಾರರು ಕೋಟಿ ಕೋಟಿ ಲೂಟಿ ಹೊಡೆದರೆ, ಇನ್ನು ಕೆಲವು ಆಟಗಾರರು ಖರೀದಿ ಮಾಡುವವರಿಲ್ಲದೆ ಬೇಸತ್ತಿದ್ದು ಸುಳ್ಳಲ್ಲ.