ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ದಕ್ಷಿಣ ಆಫ್ರಿಕಾ 250 ರನ್ ಗುರಿ ನೀಡಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಆಫ್ರಿಕಾ, 40 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 249 ರನ್ ಕಲೆಹಾಕಿದೆ.
ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ, ಆರಂಭಿಕ ಆಘಾತಕ್ಕೆ ನಲುಗಿತು. 22 ರನ್ ಗಳಿಸಿದ್ದ ಜನ್ನೆಮನ್ ಮಲನ್, ಶಾರ್ದೂಲ್ ಠಾಕೂರ್ ಎಸೆತದಲ್ಲಿ ಪೆವಿಲಿಯನ್ ಸೇರಿದರು. ನಾಯಕ ಟೆಂಬಾ ಬವುಮಾ 8 ರನ್ ಗಳಿಸಿದರೆ, ಐಡೆನ್ ಮಾರ್ಕ್ರಾಮ್ ಶೂನ್ಯಕ್ಕೆ ಔಟಾದರು. 48 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಕ್ವಿಂಟನ್ ಡಿ ಕಾಕ್, ಅರ್ಧಶತಕದ ಸಂಭ್ರಮದ ಕನಸಿನಲ್ಲಿದ್ದರು. ಆದರೆ, ರವಿ ಬಿಷ್ಣೋಯ್ LB ಬಲೆಗೆ ಕೆಡವಿದರು. ೨೨ ಓವರ್ಗಳಲ್ಲಿ 110 ರನ್ ಗಳಿಸುವಷ್ಟರಲ್ಲಿ ಆಫ್ರಿಕಾ, ೪ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
೫ನೇ ವಿಕೆಟ್ಗೆ ಜೊತೆಯಾದ ಹೆನ್ರಿಚ್ ಕ್ಲಾಸೆನ್ 74* ಹಾಗೂ ಡೇವಿಡ್ ಮಿಲ್ಲರ್ 75* ರನ್ ಬಾರಿಸುವ ಮೂಲಕ, ತಂಡದ ಸ್ಕೋರ್ ಹೆಚ್ಚಿಸಿದರು. ಈ ಜೋಡಿ 139(106)ರನ್ ಜೊತೆಯಾಟವಾಡುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿತು. ಈ ವಿಕೆಟ್ ಪಡೆಯಲು ಧವನ್ ಬಳಗ ಏನೇ ರಣತಂತ್ರ ಹೆಣೆದರೂ, ಫಲನೀಡಲಿಲ್ಲ. ಭಾರತದ ಪರ ಠಾಕೂರ್ ೨, ರವಿ ಬಿಷ್ಣೋಯ್ ಹಾಗೂ ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಕಬಳಿಸಿದರು.
ಇನ್ನು, ಮಳೆಯಿಂದಾಗಿ ಪಂದ್ಯ ಆರಂಭ ತಡವಾದ ಕಾರಣ ಎರಡೂ ಇನಿಂಗ್ಸ್‌ಗಳಿಂದ ತಲಾ 10 ಓವರ್‌ಗಳನ್ನು ಕಡಿತಗೊಳಿಸಲಾಗಿದೆ. ಹೀಗಾಗಿ ಪವರ್‌ಪ್ಲೇನಲ್ಲಿ ಬೌಲರ್ಗಳ ಬಳಕೆಯಲ್ಲೂ ಬದಲಾವಣೆ ಮಾಡಲಾಗಿದೆ. ಮೊದಲ ಪವರ್‌ಪ್ಲೇ 8 ಓವರ್ ಮಾತ್ರ ಇರುತ್ತದೆ. ಎರಡನೇ ಪವರ್‌ಪ್ಲೇ 30 ಓವರ್ ಬದಲಿಗೆ 24 ಓವರ್‌ಗಳಾಗಿರುತ್ತದೆ ಮತ್ತು ಕೊನೆಯ ಪವರ್‌ಪ್ಲೇ 10 ಓವರ್ ಬದಲಿಗೆ 8 ಓವರ್ ಇರುತ್ತದೆ.