ದೆಹಲಿಯ (Delhi) ಫಿರೋಜ್ ಶಾ ಕೋಟ್ಲಾ (Feroz Shah Kotla) ಮೈದಾನದಲ್ಲಿ ಭಾರತದ ಸ್ಪಿನ್ನರ್‌ಗಳು (Indian Spinners) ಗಿರಗಿರನೆ ಚೆಂಡು ತಿರುಗಿಸಿದರು. ದಕ್ಷಿಣ ಆಫ್ರಿಕಾದ (South Africa) ಬ್ಯಾಟ್ಸ್‌ಮನ್‌ಗಳು ಏನಾಗುತ್ತಿದೆ ಅನ್ನುವುದನ್ನು ಅರ್ಥಮಾಡಿಕೊಳ್ಳುವ ಹೊತ್ತಿಗೆ ಆಲೌಟ್ ಆಗಿ ಆಗಿತ್ತು. 99 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿದ ದಕ್ಷಿಣ ಆಫ್ರಿಕಾ ಅಂತಿಮ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿತು. ಭಾರತ (India) ಧವನ್ (Shikhar Dhawan) ನಾಯಕತ್ವದಲ್ಲಿ ಮತ್ತೊಂದು ಸರಣಿ ಗೆದ್ದು ಬೀಗಿತು (Ind VS SA).
ಟಾಸ್ ಗೆದ್ದ ಭಾರತ (Ind) ದಕ್ಷಿಣ ಆಫ್ರಿಕಾ (SA) ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತು. ಒದ್ದೆ ಔಟ್‌ಫೀಲ್ಡ್‌ನ ಲಾಭ ಪಡೆದ ಭಾರತೀಯ ಬೌಲರ್‌ಗಳು ದಕ್ಷಿಣ ಆಫ್ರಿಕಾ ತಂಡವನ್ನು ಸಾಕಷ್ಟು ಕಾಡಿದರು. ಕ್ವಿಂಟಾನ್ ಡಿ ಕಾಕ್ 6 ರನ್‌ಗಳಿಸಿದ್ದಾಗ ವಾಷಿಂಗ್ಟನ್ ಸುಂದರ್‌ಗೆ ವಿಕೆಟ್ ಒಪ್ಪಿಸಿದರು. ಮೊಹಮ್ಮದ್ ಸಿರಾಜ್ ರೀಜಾ ಹೆಂಡ್ರಿಕ್ಸ್ (3) ಮತ್ತು ಜನ್ನೆಮನ್ ಮಲಾನ್ (15) ವಿಕೆಟ್ ಪಡೆದರು. ಶಾಬಾಸ್ ಅಹ್ಮದ್ 9 ರನ್‌ಗಳಿಸಿದ್ದ ಏಡಿಯನ್ ಮಾರ್ಕ್‌ರಾಂ ವಿಕೆಟ್ ಹಾರಿಸಿದರು.
ಹಂಗಾಮಿ ನಾಯಕ ಡೇವಿಡ್ ಮಿಲ್ಲರ್ ಆಟಕ್ಕೆ ವಾಷಿಂಗ್ಟನ್ ಸುಂದರ್ ಕಡಿವಾಣ ಹಾಕಿದರು. 34 ರನ್‌ಗಳಿಸಿದ್ದ ಹೆನ್ರಿಚ್ ಕ್ಲಾಸನ್ ಶಹಬಾಸ್‌ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಕುಲ್‌ದೀಪ್ ಯಾದವ್ ಪಟಪಟನೆ 4 ವಿಕೆಟ್ ಪಡೆದು ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್‌ಗೆ ಮಂಗಳ ಹಾಡಿದರು. ದಕ್ಷಿಣ ಆಫ್ರಿಕಾ ಕೇವಲ 27.1 ಓವರುಗಳಲ್ಲಿ 99 ರನ್‌ಗೆ ಆಲೌಟ್ ಆಯಿತು. ಭಾರತದ ಪರ ಕುಲ್‌ದೀಪ್ ಯಾದವ್ 18 ರನ್‌ಗೆ 4 ವಿಕೆಟ್ ಪಡೆದರೆ, ಸುಂದರ್, ಶಹಬಾಸ್ ಮತ್ತು ಸಿರಾಜ್ ತಲಾ 2 ವಿಕೆಟ್ ಪಡೆದರು.
100 ರನ್‌ಗಳ ಸುಲಭ ಚೇಸಿಂಗ್ ಆರಂಭಿಸಿದ ಭಾರತಕ್ಕೆ 42 ರನ್‌ಗಳ ಆರಂಭ ಸಿಕ್ಕಿತ್ತು. ಆದರೆ 8 ರನ್‌ಗಳಿಸಿದ್ದ ಧವನ್ ರನ್‌ಔಟ್ ಆಗುವ ಮೂಲಕ ಶಾಕ್ ಅನುಭವಿಸಿದರು. ಇಶನ್ ಕಿಶನ್ 10 ರನ್‌ಗಳಿಸಿ ನಿರ್ಗಮಿಸಿದರು. ಆದರೆ ಶುಭ್ಮನ್ ಗಿಲ್ ಅದ್ಭುತ ಲಯದಲ್ಲಿದ್ದರು. ಇವರಿಗೆ ಶ್ರೇಯಸ್ ಅಯ್ಯರ್ ಉತ್ತಮ ಸಾಥ್ ನೀಡಿದರು. ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ದಂಡಿಸಿದ ಈ ಜೋಡಿ ಭಾರತದ ಜಯವನ್ನು ಸುಲಭವಾಗಿಸಿತು. ಶುಭ್ಮನ್ ಗಿಲ್ 49 ರನ್‌ಗಳಿಸಿದ್ದಾಗ ಎಲ್‌ಬಿ ಬಲೆಗೆ ಬಿದ್ದು ಅರ್ಧಶತಕ ತಪ್ಪಿಸಿಕೊಂಡರು. ಶ್ರೇಯಸ್ ಅಯ್ಯರ್ ಅಜೇಯ 28 ರನ್‌ಗಳಿಸಿದರು. ಭಾರತ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.