ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲಿನ ಬಳಿಕ ಟೀಂ ಇಂಡಿಯಾ ಮತ್ತೊಂದು ಟಿ೨೦ ಸರಣಿಗೆ ಸಜ್ಜಾಗಿದೆ. ನಾಳೆ ವೆಲ್ಲಿಂಗ್ಟನ್ ಕ್ರೀಡಾಂಗಣದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಟಿ20 ಸರಣಿ ಆರಂಭವಾಗಲಿದೆ. ಐರ್ಲೆಂಡ್ ಸರಣಿಯ ನಂತರ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ತಂಡದ ನೇತೃತ್ವ ವಹಿಸಿದ್ದಾರೆ. ಹೀಗಾಗಿಯೇ, ಈ ಸರಣಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಹಿರಿಯ ಆಟಗಾರರಿಗೆ ಕೊಕ್: ಈ ಸರಣಿಯಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಕೆಲ ತರಬೇತಿ ಸಿಬ್ಬಂದಿಯೂ ಈ ಸರಣಿಯಲ್ಲಿ ಇಲ್ಲ. ಹೀಗಾಗಿ, ಕೇನ್ ಪಡೆಯ ವಿರುದ್ಧ ಯುವ ಆಟಗಾರರ ಪ್ರದರ್ಶನ ಹೇಗಿರಲಿದೆ ಎನ್ನುವುದಕ್ಕೆ ಉತ್ತರ ಸಿಗಲಿದೆ. ಅಲ್ಲದೆ, ರೋಹಿತ್ ಶರ್ಮ ನಂತರ ಹಾರ್ದಿಕ್ ಮುಂದಿನ ನಾಯಕ ಎಂಬ ಮಾತುಗಳು ಕೇಳಿಬರುತ್ತಿವೆ. ಆದ್ದರಿಂದ, ಪಾಂಡ್ಯ ನಾಯಕತ್ವದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಎರಡು ತಂಡಗಳ ಬಲಾಬಲ ನೋಡಿದರೆ, ಪಾಂಡ್ಯ ಬಳಗ ಬಲಿಷ್ಠವಾಗಿದೆ. ಇದುವರೆಗೂ ಎರಡು ತಂಡಗಳು ಒಟ್ಟು 20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಟೀಂ ಇಂಡಿಯಾ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, 9 ಪಂದ್ಯದಲ್ಲಿ ಸೋಲು ಕಂಡಿದೆ. ಇನ್ನು 2020ರಲ್ಲಿ ಭಾರತ ಕಿವೀಸ್ ಪ್ರವಾಸ ಕೈಗೊಂಡಿದ್ದಾಗಲೂ, ಕೊಹ್ಲಿ ಬಳಗ ಸರಣಿ ಗೆದ್ದಿತ್ತು. 5 T20ಗಳ ಪೈಕಿ ಐದು ಪಂದ್ಯಗಳನ್ನು ಸರಣಿ ಕ್ಲೀನ್ ಸ್ವೀಪ್ ಮಾಡಿತ್ತು.
ವೆಲ್ಲಿಂಗ್ಟನ್ ಕ್ರೀಡಾಂಗಣ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದೆ. ಇಲ್ಲಿ ಆಡಿರುವ ಕಳೆದ ಮೂರು ಟಿ20 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡದ ಸರಾಸರಿ ಸ್ಕೋರ್ 169 ಆಗಿದೆ. ಇಲ್ಲಿನ ಪರಿಸ್ಥಿತಿಗ ವೇಗಿಗಳಿಗೆ ಹೆಚ್ಚು ಒಲವು ತೋರಿದರೂ ಕಳೆದ ಮೂರು ಪಂದ್ಯಗಳಲ್ಲಿ ಶೇಕಡಾ 60ರಷ್ಟು ವಿಕೆಟ್‌ಗಳನ್ನು ಸ್ಪಿನ್ನರ್‌ಗಳು ಪಡೆದಿದ್ದಾರೆ.
ನ್ಯೂಜಿಲೆಂಡ್ ಸಂಭಾವ್ಯ ತಂಡ: ಡೆವೊನ್ ಕಾನ್ವೇ, ಫಿನ್ ಅಲೆನ್, ಕೇನ್ ವಿಲಿಯಮ್ಸನ್ (ನಾಯಕ), ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಲೂಕಿ ಫರ್ಗುಸನ್, ಟಿಮ್ ಸೌಥಿ ಮತ್ತು ಇಶ್ ಸೋಧಿ.
ಭಾರತ ಸಂಭಾವ್ಯ ತಂಡ: ಶುಭಮನ್ ಗಿಲ್, ರಿಷಬ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್ ಮತ್ತು ವಾಷಿಂಗ್ಟನ್ ಸುಂದರ್.