ಟೀಮ್ ಇಂಡಿಯಾ (Team India) ಮತ್ತು ಇಂಗ್ಲೆಂಡ್ (England) ನಡುವಿನ ಕ್ರಿಕೆಟ್ ಸರಣಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಒಂದೇ ಒಂದು ಪಂದ್ಯ ಬಾಕಿ ಉಳಿದಿದ್ದು, ಫೈನಲ್ ಟಚ್ ಕೊಡಲು ವೇದಿಕೆ ಸಿದ್ಧವಾಗಿದೆ. ಭಾನುವಾರ ಈ ಪಂದ್ಯ ನಡೆಯಲಿದ್ದು, ಗೆದ್ದವರು ಏಕದಿನ ಸರಣಿ ಗೆಲ್ಲಲಿದ್ದಾರೆ. ಮ್ಯಾಂಚೆಸ್ಟರ್‌ನಲ್ಲಿ ನಡೆಯುವ ಈ ಪಂದ್ಯಕ್ಕೆ ಫೈನಲ್ ಪಂದ್ಯದ ಮಹತ್ವವಿದೆ.
5 ಪಂದ್ಯಗಳ ಟೆಸ್ಟ್ ಸರಣಿಯನ್ನು (Test Series) 2 ಭಾಗಗಳಲ್ಲಿ ಆಡಲಾಗಿತ್ತು. ಆರಂಭದಲ್ಲಿ ಭಾರತ 2-1 ರಿಂದ ಮುಂದೆ ಇದ್ದರೂ ಕೊನೆಯ ಟೆಸ್ಟ್ ಪಂದ್ಯ ಇಂಗ್ಲೆಂಡ್ ಭರ್ಜರಿಯಾಗಿ ಗೆದ್ದು ಸರಣಿ ಸಮ ಮಾಡಿಕೊಂಡಿತ್ತು. ಆದರೆ ಹಿಂದಿನ ಸರಣಿಯಲ್ಲಿ ಕಪ್ ಗೆದ್ದ ಭಾರತ ಅದನ್ನು ತನ್ನ ಬಳಿಯೇ ಉಳಿಸಿಕೊಂಡಿತು. ಅದಾದ ಮೇಲೆ ಟಿ20 ಸರಣಿ (T20 Series) ಭಾರತ ಪಾಲಾಗಿತ್ತು. 3 ಪಂದ್ಯಗಳ ಸರಣಿಯಲ್ಲಿ ಭಾರತ 2-1ರಿಂದ ಮುನ್ನಡೆ ಸಾಧಿಸಿಸ ಸರಣಿ ಕೈವಶ ಮಾಡಿಕೊಂಡಿತು.
ಈಗ ಏಕದಿನ ಸರಣಿಯ (ODI Series) ಕಥೆ. ಮೊದಲ ಏಕದಿನ ಪಂದ್ಯವನ್ನು ಗೆದ್ದ ಭಾರತ 1-0ಯ ಮುನ್ನಡೆ ಸಾಧಿಸಿತ್ತು. ಆದರೆ ಲಾರ್ಡ್ಸ್‌ನಲ್ಲಿ ಏಕದಿನ ಕ್ರಿಕೆಟ್‌ನ ವಿಶ್ವಚಾಂಪಿಯನ್ (World Champion) ಇಂಗ್ಲೆಂಡ್ ಪಟ್ಟು ಬಿಡಲಿಲ್ಲ. ಭಾರತವನ್ನು ಹೀನಾಯವಾಗಿ ಸೋಲಿಸಿ ಸರಣಿಯಲ್ಲಿ ಸಮಬಲ ಸಾಧಿಸಿದೆ. ಅಂತಿಮ ಪಂದ್ಯಕ್ಕೆ ಹೆಚ್ಚು ಮಹತ್ವ ತಂದುಕೊಟ್ಟಿದೆ.

ಹಾಗಂತ ಟೀಮ್ ಇಂಡಿಯಾ ಸುಲಭವಾಗಿ ಪಟ್ಟು ಬಿಟ್ಟುಕೊಡುತ್ತದೆ ಎಂದು ಹೇಳುವಹಾಗಿಲ್ಲ. ಯಾಕಂದರೆ ಹೊಸ ಟೀಮ್ ಇಂಡಿಯಾ ಅಸಾಧ್ಯ ಅನ್ನುವಂತಹದ್ದನ್ನು ಸಾಧಿಸಿ ತೋರಿಸಿದೆ. ಚಾಲೆಂಜ್‌ಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದೆ. ಹೀಗಾಗಿ ಮ್ಯಾಂಚೆಸ್ಟರ್‌ನಲ್ಲೂ ಮ್ಯಾಜಿಕ್ ಮಾಡುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ಸೂಪರ್ ಸಂಡೇಯ ಪಂದ್ಯ ಸೂಪರ್ ಆಗಿರುವುದರಲ್ಲಿ ಅನುಮಾನವಿಲ್ಲ.