ಎರಡೂ ತಂಡಗಳು ಕೂಡ ಖಡಕ್ ಆಗಿವೆ. ತವರಿನಲ್ಲಿ ಆಟ ಆಡುವುದರಿಂದ ಟೀಮ್ ಇಂಡಿಯಾ (Team India) ಒಂದು ಹೆಜ್ಜೆ ಮುಂದೆಯೇ ಇದೆ. ಹಾಗಂತ ಆಸ್ಟ್ರೇಲಿಯಾ (Australia) ಸಾಮರ್ಥ್ಯದಲ್ಲಿ ಕಡಿಮೆ ಇಲ್ಲ. ಪ್ರಮುಖ ಆಟಗಾರರಿಗೆ ವಿರಾಮ ನೀಡಿದರೂ ಎದುರಾಳಿಯನ್ನು ಖೆಡ್ಡಾಕ್ಕೆ ಕೆಡವುವ ಆಟಗಾರರ ದಂಡೇ ಇದೆ. ಹೀಗಾಗಿ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ (Ind VS Aus) ತಂಡಗಳ ನಡುವೆ ನಡೆಯುವ ಮೊಹಾಲಿ (Mohali) ಕದನ ಕುತೂಹಲ ಕೆರಳಿಸಿದೆ.
ಎರಡೂ ತಂಡಗಳು ಕೂಡ ಟಿ20 ವಿಶ್ವಕಪ್ (T20 World Cup) ದೃಷ್ಟಿಯಲ್ಲಿಟ್ಟುಕೊಂಡೇ ಕಣಕ್ಕಿಳಿಯುತ್ತಿವೆ. ಫಾರ್ಮ್ ಇಲ್ಲದ ಬ್ಯಾಟ್ಸ್ಮನ್ಗಳು ರನ್ಗಳಿಸಬೇಕು. ಲಯ ತಪ್ಪಿದ ಬೌಲರ್ಗಳು ಲೈನ್ ಅಂಡ್ ಲೆಂಗ್ತ್ ಕಂಡುಕೊಳ್ಳಬೇಕು ಅನ್ನುವ ಲೆಕ್ಕಾಚಾರದಲ್ಲಿವೆ. ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ (Australia) ಕೂಡ ತನ್ನ ಸಾಮರ್ಥ್ಯದ ಟೆಸ್ಟ್ಗೆ ಹೊರಟಿದೆ. ಹಾಗಂತ ಆಟಗಾರರಿಗೆ ಅಪ್ಪಿ ತಪ್ಪಿಯೂ ಗಾಯವಾಗಬಾರದೆಂದು ಎರಡೂ ತಂಡಗಳು ಜಾಗೃತೆವಹಿಸಿವೆ.
ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಕೆ.ಎಲ್. ರಾಹುಲ್ (KL Rahul) ಭಾರತದ (Ind) ಇನ್ನಿಂಗ್ಸ್ ಆರಂಭಿಸಲಿದ್ದಾರೆ. ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಟಾಪ್ ಆರ್ಡರ್ ಬ್ಯಾಟಿಂಗ್ಗೆ ಬಲ. ರಿಷಬ್ ಮತ್ತು ಹಾರ್ದಿಕ್ ಪಾಂಡ್ಯಾ ಜೊತೆಗೆ ದಿನೇಶ್ ಕಾರ್ತಿಕ್ ಫಿನಿಷರ್ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ. ಭುವನೇಶ್ವರ್ ಕುಮಾರ್, ಜಸ್ಪ್ರಿತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಫಾಸ್ಟ್ ಬೌಲಿಂಗ್ ಸ್ಪೆಷಲಿಸ್ಟ್ಗಳು. ಹಾರ್ದಿಕ್ 4ನೇ ವೇಗಿ. ಯಜುವೇಂದ್ರ ಚಹಲ್ ಮಾತ್ರ ಸ್ಪೆಷಲಿಸ್ಟ್ ಸ್ಪಿನ್ನರ್. ಹೀಗಾಗಿ ಕಾರ್ತಿಕ್ ಬದಲು ಹೂಡ ಅವಕಾಶ ಪಡೆದರೂ ಪಡೆಯಬಹುದು.
ಆಸ್ಟ್ರೇಲಿಯಾ (Aus) ತಂಡದ ಇನ್ನಿಂಗ್ಸ್ನಲ್ಲಿ ಆರೋನ್ ಫಿಂಚ್ ಮತ್ತು ಜೋಶ್ ಇಂಗ್ಲಿಸ್ ಆರಂಭಿಸಲಿದ್ದಾರೆ. ಸ್ಟೀವ್ ಸ್ಮಿತ್, ಕೆರೂನ್ ಗ್ರೀನ್, ಟಿಮ್ ಡೇವಿಡ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಬ್ಯಾಟಿಂಗ್ ಬಲ. ಪ್ಯಾಟ್ ಕಮಿನ್ಸ್, ಆಡಂ ಜಂಪಾ, ಶಾನ್ ಅಬೋಟ್ ಮತ್ತು ಡೇನಿಯಲ್ ಸ್ಯಾಮ್ಸ್ ಬೌಲಿಂಗ್ ವಿಭಾಗವನ್ನು ನೋಡಿಕೊಳ್ಳಲಿದ್ದಾರೆ.
ಮೊಹಾಲಿ ಪಿಚ್ ಬ್ಯಾಟಿಂಗ್ ಸ್ವರ್ಗ. ಆದರೆ ಎರಡನೇ ಇನ್ನಿಂಗ್ಸ್ ವೇಳೆ ಬೀಳುವ ಡ್ಯೂ ಫ್ಯಾಕ್ಟರ್ ಚೇಸಿಂಗ್ ಮಾಡುವವರಿಗೆ ಹೆಚ್ಚು ಸಹಾಯ ಮಾಡುತ್ತದೆ. ಹೀಗಾಗಿ ಟಾಸ್ ಮೇಲೆ ಎಲ್ಲರ ಕಣ್ಣಿದೆ.