ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಟೀಂ ಇಂಡಿಯಾ ಆಟಗಾರರು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದಾರೆ. ಈ ನಡುವೆ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್(171) ಪದಾರ್ಪಣೆ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಡೊಮಿನಿಕಾದ ರೋಸೋವ್ನ ವಿಂಡ್ಸರ್ ಪಾರ್ಕ್ನಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನದಂದು ತಮ್ಮ ಚೊಚ್ಚಲ ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸಿದ್ದ ಜೈಸ್ವಾಲ್ ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರು ಬರೆದಿದ್ದಾರೆ. ಅಲ್ಲದೇ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿದ ಭಾರತದ 17ನೇ ಬ್ಯಾಟರ್ ಎನಿಸಿಕೊಂಡರು. 2ನೇ ದಿನದಂತ್ಯಕ್ಕೆ 143* ರನ್ಗಳೊಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಯುವ ಬ್ಯಾಟರ್, ಚೊಚ್ಚಲ ಪಂದ್ಯದಲ್ಲಿ ದ್ವಿಶತಕ ಬಾರಿಸುವ ತವಕದಲ್ಲಿದ್ದರು.
ನಿರೀಕ್ಷೆಯಂತೆ 3ನೇ ದಿನದಾಟದಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಜೈಸ್ವಾಲ್, ವೈಯಕ್ತಿಕ 171 ರನ್ಗಳಿಸಿದ್ದ ವೇಳೆ ಅಲ್ಜಾರಿ ಜೋಸೆಫ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಆದರೆ ಇದು ಟೀಂ ಇಂಡಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟರ್ ಗಳಿಸಿದ 3ನೇ ಗರಿಷ್ಠ ಸ್ಕೋರ್ ಆಗಿದೆ. ಇದಕ್ಕೂ ಮುನ್ನ ಆರಂಭಿಕ ಬ್ಯಾಟರ್ ಶಿಖರ್ ಧವನ್ 2013ರಲ್ಲಿ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 187 ರನ್ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, 2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 177 ರನ್ಗಳಿಸಿದ್ದು 2ನೇ ಗರಿಷ್ಠ ಸ್ಕೋರ್ ಆಗಿದೆ.
ಉಳಿದಂತೆ ಭಾರತದ ಮಾಜಿ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ 1969ರಲ್ಲಿ ಕಾನ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ 137 ರನ್ಗಳಿಸಿದ್ದ 4ನೇ ಗರಿಷ್ಠ ಸ್ಕೋರ್ ಆಗಿದ್ದರೆ. ಮುಂಬೈ ಬ್ಯಾಟರ್ ಪೃಥ್ವಿ ಶಾ 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 134 ರನ್ಗಳಿಸಿ 5ನೇ ಸ್ಥಾನ ಪಡೆದಿದ್ದಾರೆ.
IND v WI, Team India, Yashasvi Jaiswal, West Indies, Sports Karnataka