ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್(104) ಹಾಗೂ 1ನೇ ಕ್ರಮಾಂಕದಲ್ಲಿ ಬಂದ ಶ್ರೇಯಸ್ ಅಯ್ಯರ್(105) ಅವರ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ 399/5 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ.
ಇಂಧೋರ್ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 399 ರನ್ಗಳಿಸಿದೆ. ಭಾರತದ ಪರ ಗಿಲ್(104) ಹಾಗೂ ಅಯ್ಯರ್(105) ಶತಕ ಸಿಡಿಸಿ ಮಿಂಚಿದರೆ. ನಾಯಕ ಕೆಎಲ್ ರಾಹುಲ್(52) ಹಾಗೂ ಸೂರ್ಯಕುಮಾರ್(72*) ಬಿರುಸಿನ ಬ್ಯಾಟಿಂಗ್ ಮೂಲಕ ಉಪಯುಕ್ತ ರನ್ಗಳಿಸಿದರು. ಇದು ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ದಾಖಲಿಸಿದ ಗರಿಷ್ಠ ಸ್ಕೋರ್ ಆಗಿದೆ. ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಭಾರತ 383 ರನ್ಗಳಿಸಿತ್ತು.
ಶುಭ್ಮನ್-ಶ್ರೇಯಸ್ ಶತಕ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್(8) ರನ್ಗಳಿಸಿ ಪೆವಿಲಿಯನ್ ಸೇರಿದರು. ಆದರೆ 2ನೇ ವಿಕೆಟ್ಗೆ ಜೊತೆಯಾದ ಶುಭ್ಮನ್ ಗಿಲ್(104 ರನ್, 97 ಬಾಲ್, 6 ಬೌಂಡರಿ, 4 ಸಿಕ್ಸ್) ಹಾಗೂ ಶ್ರೇಯಸ್ ಅಯ್ಯರ್(105 ರನ್, 90 ಬಾಲ್, 11 ಬೌಂಡರಿ, 3 ಸಿಕ್ಸ್) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಈ ಜೋಡಿ 2ನೇ ವಿಕೆಟ್ಗೆ ಬರೋಬ್ಬರಿ 200 ರನ್ಗಳ ಜೊತೆಯಾಟದ ಮೂಲಕ ತಂಡದ ಮೊತ್ತವನ್ನ ಹೆಚ್ಚಿಸಿದರು.
ರಾಹುಲ್-ಸೂರ್ಯ ಬಿರುಸಿನ ಆಟ
ಶುಭ್ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ವಿಕೆಟ್ ಪತನದ ನಂತರದಲ್ಲಿ ಬಂದ ನಾಯಕ ಕೆಎಲ್ ರಾಹುಲ್(52 ರನ್, 38 ಬಾಲ್, 3 ಬೌಂಡರಿ, 3 ಸಿಕ್ಸ್) ಕೂಡ ಬಿರುಸಿನ ಆಟವಾಡಿದರು. ಇನ್ನಿಂಗ್ಸ್ ಆರಂಭದಿಂದಲೇ ಸ್ಪೋಟಕ ಆಟಕ್ಕೆ ಮೊರೆ ಹೋದ ರಾಹುಲ್, ಆಕರ್ಷಕ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದರು. ಇವರಿಗೆ ಉತ್ತಮ ಸಾಥ್ ನೀಡಿದ ಸೂರ್ಯಕುಮಾರ್ ಯಾದವ್(72* ರನ್, 36 ಬಾಲ್, 6 ಬೌಂಡರಿ, 6 ಸಿಕ್ಸ್) ಕೂಡ ಸ್ಪೋಟಕ ಬ್ಯಾಟಿಂಗ್ನಿಂದ ಆಸೀಸ್ ಬೌಲರ್ಗಳ ಬೆವರಿಳಿಸಿದರು. ಉಳಿದಂತೆ ಇಶಾನ್ ಕಿಶನ್(31), ರವೀಂದ್ರ ಜಡೇಜಾ(13*) ರನ್ಗಳಿಸಿದರು.
ಅಂತಿಮವಾಗಿ ಭಾರತ 50 ಓವರ್ಗಳಲ್ಲಿ 5 ವಿಕೆಟ್ಗೆ 399 ರನ್ಗಳ ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಆಸ್ಟ್ರೇಲಿಯಾ ಪರ ಕೆಮರೂನ್ ಗ್ರೀನ್, ಬರೋಬ್ಬರಿ 103 ರನ್ ನೀಡಿ 2 ವಿಕೆಟ್ ಪಡೆದರೆ. ಹೇಜ಼ಲ್ವುಡ್, ಅಬೋಟ್ ಹಾಗೂ ಜ್ಹಂಪ ತಲಾ 1 ವಿಕೆಟ್ ಪಡೆದರು. ಮೂರು ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಮೊದಲ ಪಂದ್ಯದಲ್ಲಿ ಸೋತಿರುವ ಆಸ್ಟ್ರೇಲಿಯಾ ಸರಣಿ ಜೀವಂತ ಇರಿಸಲು ಈ ಪಂದ್ಯವನ್ನ ಗೆಲ್ಲಲೇಬೇಕಿದ್ದು, ಇದಕ್ಕಾಗಿ 400 ರನ್ಗಳ ಕಠಿಣ ಟಾರ್ಗೆಟ್ ಚೇಸ್ ಮಾಡಬೇಕಿದೆ.
IND v AUS, India, Australia, Shubman Gill, Shreyas Iyer, KL Rahul