ಅತ್ತ ದಕ್ಷಿಣ ಆಫ್ರಿಕಾ, ಇತ್ತ ಶ್ರೀಲಂಕಾ.. ಎರಡೂ ತಂಡಗಳಿಗೂ ಗೆಲುವು ಅನಿವಾರ್ಯ. ದಕ್ಷಿಣ ಆಫ್ರಿಕಾ ಆಡಿರುವ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದು ಮತ್ತೊಂದನ್ನು ಸೋತಿದೆ. ಶ್ರೀಲಂಕಾದ ಸ್ಥಿತಿಯೂ ಹೀಗೇ ಇದೆ. ಎರಡೂ ತಂಡಗಳ ಖಾತೆಯಲ್ಲಿ ತಲಾ 2 ಅಂಕಗಳು ಇವೆ. ಆದರೆ ರನ್ರೇಟ್ನಲ್ಲಿ ದಕ್ಷಿಣ ಆಫ್ರಿಕಾ ಮುಂದಿದೆ. ಹೀಗಾಗಿ ಶಾರ್ಜಾದಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಗೆದ್ದವರು, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಜೊತೆ ಸೆಮಿಫೈನಲ್ ಸ್ಥಾನಕ್ಕಾಗಿ ಹೋರಾಟ ಮಾಡಲಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ಮತ್ತು ವೆಸ್ಟ್ಇಂಡೀಸ್ ವಿರುದ್ಧ ಆಡಿರುವ ಎರಡೂ ಪಂದ್ಯಗಳಲ್ಲೂ ಬೌಲಿಂಗ್ ಸಾಮರ್ಥ್ಯ ತೋರಿಸಿದೆ. ಕಗಿಸೊ ರಬಾಡ, ಅನ್ರಿಚ್ ನೋರ್ಟ್ಜೆಯ ವೇಗ ಎದುರಾಳಿಯನ್ನು ಆರಂಭದಲ್ಲೇ ಅಳುಕಿಸುತ್ತಿದೆ. ಡ್ವೈನ್ ಪ್ರಿಟೋರಿಯಸ್ ಡೆತ್ ಓವರ್ ಸ್ಪೆಷಲಿಸ್ಟ್. ಕೇಶವ್ ಮಹಾರಾಜ್ ಮತ್ತು ತಬ್ರೈಜ್ ಶಂಸಿ ಸ್ಪಿನ್ ಅಸ್ತ್ರಗಳು. ಇವರ ಜೊತೆ ಏಡಿಯನ್ ಮಾರ್ಕ್ ರಾಂ ಕೂಡ ಕೈ ಜೋಡಿಸಬಲ್ಲರು. ಆದರೆ ಬ್ಯಾಟಿಂಗ್ ಸ್ಥಿರತೆ ಬಗ್ಗೆ ಸಂಶಯವಿದೆ. ನಾಯಕ ತೆಂಬ ಬವುಮಾ ರನ್ಗಳಿಸುತ್ತಿಲ್ಲ. ಹೊಸದಾಗಿ ತಂಡ ಸೇರಿಕೊಂಡಿರುವ ರಿಜಾ ಹೆಂಡ್ರಿಕ್ಸ್ ವಿಂಡೀಸ್ ವಿರುದ್ಧ ಮಿಂಚಿದ್ದಾರೆ. ಮಾರ್ಕ್ ರಾಂ ರನ್ಗಳಿಸುವ ತಾಕತ್ತು ಹೊಂದಿದ್ದಾರೆ. ಆದರೆ ಮಧ್ಯಮ ಮತ್ತು ಕೆಳ ಸರದಿಯ ಬಗ್ಗೆ ನಂಬಿಕೆ ಇಲ್ಲ. ಕ್ವಿಂಟನ್ ಡಿ ಕಾಕ್ ಆಡಲು ಸಿದ್ಧವಾಗಿರುವುದರಿಂದ ಬ್ಯಾಟಿಂಗ್ ವಿಭಾಗಕ್ಕೆ ಹೆಚ್ಚು ಬಲ ಬರಬಹುದು.
ಶ್ರೀಲಂಕಾ ತಂಡಕ್ಕೆ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಕೂಡ ಸಮಸ್ಯೆ ಆಗಿದೆ. ಕುಸಾಲ್ ಪೆರೆರಾ, ಪತುನ್ ನಿಸ್ಸಾಂಕ, ಅಸಲಂಕ ಚರಿತ ಮತ್ತು ಭಾನುಕಾ ರಾಜಪಕ್ಸೆ ಪ್ರಮುಖ ಬ್ಯಾಟಿಂಗ್ ಶಕ್ತಿಗಳು. ಆದರೆ ವೇಗದ ಬೌಲಿಂಗ್ ವಿರುದ್ಧ ಇವರು ಹೇಗೆ ಆಡ್ತಾರೆ ಅನ್ನುವುದು ಕುತೂಹಕ್ಕೆ ಕಾರಣವಾಗಿದೆ. ಬೌಲಿಂಗ್ನಲ್ಲಿ ಲಹಿರು ಕುಮಾರ, ಕರುಣರತ್ನೆ ಲಯ ಕಂಡುಕೊಳ್ಳಬೇಕಿದೆ. ಮಿಸ್ಟ್ರಿ ಸ್ಪಿನ್ನರ್ ಮಹೇಶ್ ತೀಕ್ಷಣ ಮತ್ತು ಆಲ್ರೌಂಡರ್ ವನಿಂದು ಹಸರಂಗ ತನ್ನ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಬೇಕಿದೆ. ಶಾರ್ಜಾ ಪಿಚ್ ಸ್ಲೋ ಆಗಿರುವುದು ಸ್ಪಿನ್ನರ್ಗಳಿಗೆ ನೆರವು ನೀಡಬಹುದು. ಒಟ್ಟಿನಲ್ಲಿ ಗ್ರೂಪ್ ಆಫ್ ಡೆತ್ ಎಂದೇ ಕರೆಸಿಕೊಳ್ಳುವ ಗ್ರೂಪ್ 1 ಹೋರಾಟ ಕುತೂಲದ ಕೇಂದ್ರ ಬಿಂದುವಾಗಿ ಬಿಟ್ಟಿದೆ.