ನ್ಯೂಜಿಲೆಂಡ್ ವಿರುದ್ಧ ಸ್ಕಾಟ್ಲೆಂಡ್ ಅಚ್ಚರಿಯ ಫಲಿತಾಂಶ ನೀಡಲು ತಯಾರಿ ಮಾಡಿಕೊಳ್ಳುತ್ತಿತ್ತು. ಆದರೆ ಕೊನೆಯ ಎರಡು ಓವರ್ನಲ್ಲಿ ಮಾಡಿಕೊಂಡ ಎಡವಟ್ಟು ಸ್ಕಾಟ್ಲೆಂಡ್ ಕೈಯಿಂದ ಗೆಲುವು ಕಿತ್ತುಕೊಂಡಿತು. ದುರ್ಬಲ ಸ್ಕಾಟ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಕೇವಲ 16 ರನ್ಗಳ ಅಂತರದಲ್ಲಿ ಗೆಲುವು ಕಂಡಿತು.
ಸ್ಕಾಟ್ಲೆಂಡ್ ಟಾಸ್ ಗೆದ್ದು ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತು. ಮಾರ್ಟಿನ್ ಗಪ್ಟಿಲ್ ಅಬ್ಬರಿಸುತ್ತಾ ಸಾಗಿದರು. ಆದರೆ ಡೆರಿನ್ ಮಿಚೆಲ್ 13 ರನ್ಗಳಿಸಿ ಔಟಾದರು. ಕೇನ್ ವಿಲಿಯಮ್ಸ್ ಖಾತೆಯನ್ನೇ ತೆರೆಯಲಿಲ್ಲ. ಡೆವೊನ್ ಕಾನ್ವೆ 1 ರನ್ಗಳಿಸಿ ಔಟಾದರು.
ಗಪ್ಟಿಲ್ ಅಬ್ಬರದ ಆಟಕ್ಕೆ ಯಾರೂ ತಡೆ ಹಾಕಲು ಸಾಧ್ಯವಾಗಲಿಲ್ಲ. ಗ್ಲೆನ್ ಫಿಲಿಫ್ಸ್ ಅವರಿಗೆ ಸಾಥ್ ನೀಡಿದರು. ಅಬ್ಬರಿಸುತ್ತಾ ಸಾಗಿದ ಗಪ್ಟಿಲ್ ಅರ್ಧಶತಕದ ಗಡಿ ಕೂಡ ದಾಟಿದರು. ಆದರೆ ಫಿಲಿಪ್ಸ್ 33 ರನ್ಗಳಿಸಿ ಔಟಾದರು. ಇನ್ನೊಂದು ಕಡೆಯಲ್ಲಿ ಗಪ್ಟಿಲ್ 6 ಫೋರ್ ಮತ್ತು 7 ಸಿಕ್ಸರ್ ನೆರವಿನಿಂದ 56 ಎಸೆತಗಳಲ್ಲಿ 93 ರನ್ಗಳಿಸಿತು. 20 ಓವರುಗಳಲ್ಲಿ ಕಿವೀಸ್ 5 ವಿಕೆಟ್ ಕಳೆದುಕೊಂಡು 172 ರನ್ಗಳಿಸಿತು.
ಗುರಿ ಬೆನ್ನಟ್ಟ ಹೊರಟ ಸ್ಕಾಟ್ಲೆಂಡ್ ಅಂದುಕೊಂಡ ಆರಂಭ ಪಡೆಯಲಿಲ್ಲ. ಕೈಲ್ ಕೊಯೆಟ್ಜರ್ 17 ರನ್ಗಳಿಸಿ ಔಟಾದರೆ, ಜಾರ್ಜ್ ಮುನ್ಶಿ 22 ರನ್ಗಳಿಸಿದರು. ಮ್ಯಾಥ್ಯೂ ಕ್ರಾಸ್ 27 ರನ್ಗಳಿಸಿದರೆ, ಬೆರಿಂಗ್ಟನ್ 20 ರನ್ಗಳಿಸಿದರು. ಆದರೆ ಮೈಕಲ್ ಲಿಸ್ಕ್ 20 ಎಸೆತಗಳಲ್ಲಿ ಅಜೇಯ 42 ರನ್ ಸಿಡಿಸಿದರು. ಕೊನೆಯ ಎರಡು ಓವರುಗಳಲ್ಲಿ ಸ್ಕಾಟ್ಲೆಂಡ್ ಅನುಭವದ ಕೊರತೆ ಎದುರಿಸಿತು. ಹೀಗಾಗಿ 5 ವಿಕೆಟ್ ಕಳೆದುಕೊಂಡು 156 ರನ್ಗಳಿಸಲಷ್ಟೇ ಸಾಧ್ಯವಾಯಿತು. ನ್ಯೂಜಿಲೆಂಡ್ 16 ರನ್ಗಳ ರೋಚಕ ಗೆಲುವು ಸಾಧಿಸಿತು.