Maharaja Trophy: ಗುಲ್ಬರ್ಗ ಮಿಸ್ಟಿಕ್ಸ್ ಮುಡಿಗೆ ಕಿರೀಟ
ಕೊನೆಯ ಓವರ್ ನಲ್ಲಿ ರೋಚಕತೆ ಹುಟ್ಟಿಸಿದ್ದ Maharaja Trophy ಫೈನಲ್ ಪಂದ್ಯದಲ್ಲಿ ಕೆಚ್ಚೆದೆಯ ಆಟವನ್ನು ಪ್ರದರ್ಶಿಸಿದ ಗುಲ್ಬರ್ಗ ಮಿಸ್ಟಿಕ್ಸ್ (Gulbarga Mystics) 11 ರನ್ ಗಳಿಂದ ಬೆಂಗಳೂರು ಬ್ಲಾಸ್ಟರ್ಸ್ (Bengaluru Blasters) ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಮೊದಲು ಬ್ಯಾಟ್ ಮಾಡಿದ ಗುಲ್ಬರ್ಗ 20 ಓವರ್ ಗಳಲ್ಲಿ 3 ವಿಕೆಟ್ 220 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬೆಂಗಳೂರು 9 ವಿಕೆಟ್ ಕಳೆದು ಕೊಂಡು 209 ರನ್ ಸೇರಿಸಿ ನಿರಾಸೆ ಅನುಭವಿಸಿತು.

ಮೊದಲು ಬ್ಯಾಟ್ ಮಾಡಿದ ಗುಲ್ಬರ್ಗ ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಜೆಶ್ವತ್ ಆಚಾರ್ಯ ಹಾಗೂ ರೋಹನ್ ಪಾಟೀಲ್, ಬೆಂಗಳೂರು ಬ್ಲಾಸ್ಟರ್ಸ್ ತಂಡದ ಬೌಲರ್‌ಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ 5.2 ಓವರ್‌ಗಳಲ್ಲಿ 60 ರನ್ ಸೇರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿತು. ರೋಹನ್ ಪಾಟೀಲ್ 38 ರನ್ ಗಳಿಸಿ ಔಟ್ ಆದರು.
ಜೆಶ್ವತ್ ಆಚಾರ್ಯ ಅವರನ್ನು ಸೇರಿಕೊಂಡ ದೇವದತ್ತ ಪಡಿಕ್ಕಲ್, ಆರಂಭದಿಂದಲೇ ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡಿ ತಂಡದ ಮೊತ್ತವನ್ನು ಹೆಚ್ಚಿಸುತ್ತ ನಡೆದರು.
ಎರಡನೇ ವಿಕೆಟ್ ಜೊತೆಯಾಟದಲ್ಲಿ ಈ ಜೋಡಿ 1.2 ಓವರ್‌ಗಳಲ್ಲಿ 22 ರನ್ ಸೇರಿಸಿತು. ಜೆಶ್ವತ್ ಆಚಾರ್ಯ 39 ರನ್ ಮಾಡಿ ರಿಷಿ ಬೋಪಣ್ಣಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.

ಮೂರನೇ ವಿಕೆಟ್ ಜೊತೆಯಾಟದಲ್ಲಿ ದೇವದತ್ತ ಪಡಿಕ್ಕಲ್ ಹಾಗೂ ಕೃಷ್ಣನ್ ಶ್ರೀಜೀತ್ (38), 8.5 ಓವರ್‌ಗಳಲ್ಲಿ 76 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಮಿಂಚಿನ ಜೊತೆಯಾಟ
ದೇವದತ್ತ ಪಡಿಕ್ಕಲ್ ಅವರನ್ನು ಸೇರಿಕೊಂಡ ನಾಯಕ ಮನೀಷ್ ಪಾಂಡೆ, ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿದರು. ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 4.3 ಓವರ್‌ಗಳಲ್ಲಿ 62 ರನ್ ಸೇರಿಸಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.
ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ನೀಡಿದ ದೇವದತ್ತ ಪಡಿಕ್ಕಲ್ 56 ರನ್ ಸಿಡಿಸಿದರು. ಇವರ ಇನ್ನಿಂಗ್ಸ್ ನಲ್ಲಿ 5 ಬೌಂಡರಿ, 1 ಸಿಕ್ಸರ್ ಸೇರಿವೆ. ಮನೀಷ್ ಪಾಂಡೆ 17 ಎಸೆತಗಳಲ್ಲಿ 41 ಸಿಡಿಸಿದರು.

ಗುರಿಯನ್ನು ಹಿಂಬಾಲಿಸಿದ ಬೆಂಗಳೂರು ತಂಡದ ಆರಂಭ ಕಳಪೆಯಾಗಿತ್ತು. ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಲ್ಲದೆ ಜೊತೆಯಾಟದ ಕಾಣಿಕೆ ನೀಡುವಲ್ಲಿ ಹಿಂದೆ ಬಿದ್ದರು. ಪರಿಣಾಮ ಫೈನಲ್ ಪಂದ್ಯದಲ್ಲಿ ಬೆಂಗಳೂರು ನಿರಾಸೆ ಅನುಭವಿಸಿತು. 63 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಬೆಂಗಳೂರು ತಂಡಕ್ಕೆ ಎಲ್ ಆರ್ ಚೇತನ್ ಹಾಗೂ ಕ್ರಾಂತಿ ಕುಮಾರ್ ಜೊತೆಗೂಡಿ ಆರನೇ ವಿಕೆಟ್ ಗೆ 42 ಎಸೆತಗಳಲ್ಲಿ 98 ರನ್ ಗಳ ಜೊತೆಯಾಟವನ್ನು ನೀಡಿದರು.
ಆರಂಭಿಕ ಎಲ್ ಆರ್ ಚೇತನ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಇವರು 40 ಎಸೆತಗಳಲ್ಲಿ 91 ರನ್ ಬಾರಿಸಿದರು. ಇವರ ಮನಮೋಹಕ ಇನ್ನಿಂಗ್ಸ್ ನಲ್ಲಿ 6 ಬೌಂಡರಿ, 8 ಸಿಕ್ಸರ್ ಸೇರಿವೆ.

ಕ್ರಾಂತಿ ಕುಮಾರ್ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 47 ರನ್ ಸಿಡಿಸಿದರು. ಉಳಿದಂತೆ ಯಾವೊಬ್ಬ ಬ್ಯಾಟ್ಸ್ ಮನ್ ರನ್ ಕಲೆ ಹಾಕಲಿಲ್ಲ.
ಗುಲ್ಬರ್ಗ ತಂಡದ ಪರ ಮನೋಜ್ ಭಾಂಡಗೆ 3 ಹಾಗೂ ರಿತೇಶ್ ಭಟ್ಕಳ್, ಪ್ರಣವ್ ಭಾಟಿಯಾ ತಲಾ ಎರಡು ವಿಕೆಟ್ ಕಬಳಿಸಿದರು.
Gulbarga Mystics, Maharaja Trophy, Bengaluru Blasters