ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತ ಎಫ್ಐಎಚ್ ಪುರುಷರ ಜ್ಯೂನಿಯರ್ ವಿಶ್ವಕಪ್ ಹಾಕಿ ಪಂದ್ಯಾವಳಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ 8-2 ರಿಂದ ಪೋಲೆಂಡ್ ತಂಡವನ್ನು ಮಣಿಸಿ, ಕ್ವಾರ್ಟರ್ ಫೈನಲ್ ಹಂತ ಕಂಡಿತು.
`ಬಿ’ ಗುಂಪಿನಲ್ಲಿ ಆಡಿದ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ ಭಾರತ, ಒಟ್ಟು ಆರು ಅಂಕಗಳೊಂದಿಗೆ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಎಂಟರ ಹಂತ ಕಂಡಿತು. ಆಡಿದ ಮೂರೂ ಪಂದ್ಯಗಳಲ್ಲಿ ಜಯ ಕಂಡ ಫ್ರಾನ್ಸ್ ಗುಂಪಿನಲ್ಲಿ ಅಗ್ರ ಸ್ಥಾನದೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಪಂದ್ಯದ ನಾಲ್ಕನೇ ನಿಮಿಷದಲ್ಲಿ ಭಾರತಕ್ಕೆ ದೊರೆತ ಪೆನಾಲ್ಟಿ ಕಾರ್ನರ್ ಅನ್ನು ಸಂಜಯ್ ಗೋಲಾಗಿ ಪರಿವರ್ತಿಸಿ ತಂಡಕ್ಕೆ ಆರಂಭದಲ್ಲಿಯೇ ಮುನ್ನಡೆ ನೀಡಿದರು.
ಮುಂದೆ ಪಂದ್ಯದ ಎಂಟನೇ ನಿಮಿಷದಲ್ಲಿ ಭಾರತಕ್ಕೆ ಮತ್ತೊಂದು ಪೆನಾಲ್ಟಿ ಕಾರ್ನರ್ ದೊರಕಿತು. ಅರಜೀತ್ ಸಿಂಗ್ ಹುಂದಾಲ್, ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ತಂಡದ ಮುನ್ನಡೆಯನ್ನು 2-0 ಕ್ಕೆ ಹೆಚ್ಚಿಸಿದರು. ಮೊದಲು ಕ್ವಾರ್ಟರ್ ಅಂತ್ಯದಲ್ಲಿ ಭಾರತ 2-0 ರಿಂದ ಮುನ್ನಡೆ ಸಾಧಿಸಿತ್ತು.
ಎರಡನೇ ಕ್ವಾರ್ಟರ್ನಲ್ಲಿ ಭಾರತದ ಸುದೀಪ್ ಚಿರ್ಮಾಕೋ ಫೀಲ್ಡ್ ಗೋಲು ಬಾರಿಸಿದರು. ವಿರಾಮದ ವೇಳೆಗೆ ಭಾರತ 3-0 ರಿಂದ ಮುನ್ನಡೆ ಸಾಧಿಸಿತ್ತು.
ಮೂರನೇ ಕ್ವಾರ್ಟರ್ನ ನಾಲ್ಕನೇ ನಿಮಿಷದಲ್ಲಿ (ಪಂದ್ಯದ 34 ನೇ ನಿಮಿಷ) ಉತ್ತಮ ಸಿಂಗ್ ಫಿಲ್ಡ್ ಗೋಲು ಬಾರಿಸಿ ಭಾರತದ ಮುನ್ನಡೆಯನ್ನು 4-೦ ಗೆ ಹೆಚ್ಚಿಸಿದರು.
38 ನಿಮಿಷದಲ್ಲಿ ಭಾರತಕ್ಕೆ ದೊರೆತ ಪೆನಾಲ್ಟಿ ಕಾರ್ನರ್ ಅನ್ನು ಶರದ್ ನಂದ್ ತಿವಾರಿ ಗೋಲಾಗಿಸಿ ತಂಡದ ಮುನ್ನಡೆಯನ್ನು 5-0 ಕ್ಕೆ ಏರಿಸಿದರು.
ಪಂದ್ಯದ 4೦ ನಿಮಿಷದಲ್ಲಿ ಸುದೀಪ್ ಚಿರ್ಮಾಕೋ ಪೋಲೆಂಡ್ ಆಟಗಾರರನ್ನು ವಂಚಿಸಿ ಫೀಲ್ಡ್ ಗೋಲು ಬಾರಿಸುವ ಮೂಲಕ ತಂಡದ ಮುನ್ನಡೆಯನ್ನು 6-0 ಕ್ಕೆ ಹೆಚ್ಚಿಸಿ ತಂಡದ ಗೆಲುವನ್ನು ಖಚಿತಪಡಿಸಿದರು. ಮೂರನೇ ಕ್ವಾರ್ಟರ್ ಅಂತ್ಯದಲ್ಲಿ ಭಾರತ 6-0 ರಿಂದ ಮುನ್ನಡೆ ಸಾಧಿಸಿತ್ತು.
ನಾಲ್ಕನೇ ಕ್ವಾರ್ಟರ್ನಲ್ಲಿ ಪೋಲೆಂಡ್ ಎರಡು ಗೋಲು ಬಾರಿಸಿ ಸೋಲಿನ ಅಂತರವನ್ನು ಇಳಿಸಿತು. ಪಂದ್ಯದ 58 ನೇ ನಿಮಿಷದಲ್ಲಿ ಸಂಜಯ್ ಗೋಲು ಬಾರಿಸಿ ಭಾರತದ ಮುನ್ನಡೆಯನ್ನು 7-2 ಕ್ಕೆ ಹೆಚ್ಚಿಸಿದರು. ಅಂತಿಮವಾಗಿ ಭಾರತ ಅದೇ ಅಂತರದಲ್ಲಿ ಜಯ ದಾಖಲಿಸಿತು.
ಶನಿವಾರ ನಡೆದ `ಬಿ’ ಗುಂಪಿನ ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್, ಕೆನಡಾ ವಿರುದ್ಧ 11-1 ಗೋಲುಗಳಿಂದ ಸೋಲಿಸಿತು.