FIFA ವಿಶ್ವಕಪ್ ಫುಟ್ಬಾಲ್ ರಂಗು ದಿನ ಕಳೆದಂತೆ ಹೆಚ್ಚಾಗುತ್ತಿದೆ. ಅನಿರೀಕ್ಷಿತ ಫಲಿತಾಂಶಗಳು ಬರುತ್ತಲೇ ಇವೆ. ಇತ್ತ ಬೆಲ್ಜಿಯಂ ಸ್ಥಿರ ಪ್ರದರ್ಶನ ನೀಡಿ ತನ್ನ ಮೇಲೆ ಅಭಿಮಾನಿಗಳು ಇಟ್ಟ ನಂಬಿಕೆಯನ್ನು ಉಳಿಸಿಕಂಡಿದೆ. F ಗುಂಪಿನ ಪಂದ್ಯದಲ್ಲಿ ಬೆಲ್ಜಿಯಂ 1-0 ಗೋಲುಗಳಿಂದ ಕೆನಡಾ ತಂಡವನ್ನು ಮಣಿಸಿದೆ.
ವಿಜೇತ ತಂಡದ ಪರ ಮಿಚಿ ಬತ್ಯುವಾಯಿ ಏಕೈಕ ಗೋಲು ಸಿಡಿಸಿದರು. ಇವರು ಮೊದಲಾವಧಿಯ ಕೊನೆಯ ಕ್ಷಣದಲ್ಲಿ ಸೊಗಸಾದ ಗೋಲು ಬಾರಿಸಿದರು. ಸಹ ಆಟಗಾರ, ಮೈದಾನದ ಆ ತುದಿಯಿಂದ ನೀಡಿದ ಪಾಸ್ ನ್ನು ಪಡೆದ ಇವರು. ಚೆಂಡಿನ ಮೇಲೆ ಹಿಡಿತ ಸಾಧಿಸಿ ಎಡಗಾಲಿನಿಂದ ಪಂಚ್ ನೀಡಿದರು. ಈ ಚೆಂಡನ್ನು ತಡೆಯುವಲ್ಲಿ ಕೆನಡಾ ಗೋಲಿ ವಿಫಲರಾದರು. ಪರಿಣಾಮ ಬೆಲ್ಜಿಯಂ ಮೊದಲಾವಧಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಫಿಫಾ ರ್ಯಾಂಕಿಂಗ್ ನಲ್ಲಿ 33ನೇ ಸ್ಥಾನದಲ್ಲಿರುವ ಕೆನಡಾ ಬೆಲ್ಜಿಯಂಗೆ ಉತ್ತಮ ಹೋರಾಟ ನೀಡಿತು. ಪಂದ್ಯದುದ್ದಕ್ಕೂ ಸಮಬಲದ ಪ್ರದರ್ಶನ ನೀಡಿತು. ಆದರೆ ಒಂದು ಗೋಲು ನೀಡಿ ಕೈ ಸುಟ್ಟುಕೊಂಡಿತು. ಬೆಲ್ಜಿಯಂ ಆಟಗಾರರು 46% ಸಮಯ ಚೆಂಡನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದರೆ, ಕೆನಡಾ 43% ಸಮಯ ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದರು. ಕೆನಡಾ ಗೋಲು ಬಾರಿಸುವ ಪ್ರಯತ್ನದಲ್ಲಿ ಮುಂದಿತ್ತು. ಕೆನಡಾ ಒಟ್ಟು 21 ಬಾರಿ ಗೋಲು ಬಾರಿಸುವ ಅವಕಾಶವನ್ನು ಕೈ ಚೆಲ್ಲಿತು. ಅದರಲ್ಲಿ 4 ಗುರಿಯನ್ನು ತೀರಾ ಸನಿಹದಲ್ಲಿದ್ದವು. ಆದರೂ ಒಂದು ಪ್ರಯತ್ನವನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ.