FIFA: ಸರ್ಬಿಯಾ ಮಣಿಸಿದ ಬ್ರೆಜಿಲ್ ಶುಭಾರಂಭ
ಕತಾರ್ ದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಬ್ರೆಜಿಲ್ 2-0ಯಿಂದ ಸರ್ಬಿಯಾ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ.
ದಾಖಲೆಯ ಚಾಂಪಿಯನ್ ಬ್ರೆಜಿಲ್ ತಂಡದ ಸ್ಟಾರ್ ಆಟಗಾರ ಜೂನಿಯರ್ ನೇಮರ್ ಈ ಪಂದ್ಯದಲ್ಲಿ ಗೋಲು ಬಾರಿಸದೆ ಇರುವುದು ನಿಜಕ್ಕೂ ಅಭಿಮಾನಿಗಳಿಗೆ ಬೇಸರ ತಂದಿದೆ. ಮೊದಲಾವಧಿಯಲ್ಲಿ ಎರಡೂ ತಂಡಗಳು ಗೋಲು ಬಾರಿಸುವಲ್ಲಿ ವಿಫಲವಾದವು. ಎರಡನೇ ಅವಧಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬ್ರೆಜಿಲ್ ಅಬ್ಬರಿಸಿತು. ಬ್ರೆಜಿಲ್ ಪರ ರಿಚರ್ಲಿಸನ್ ಅವರು ಗೋಲು ಬಾರಿಸಿದರು.
ಮೊದಲಾವಧಿಯಲ್ಲಿ ಮಾಡಿದ ತಪ್ಪಿನಿಂದ ಪಾಠ ಕಲಿತ ಬ್ರೆಜಿಲ್ ಎರಡನೇ ಅವಧಿಯಲ್ಲಿ ಆಕ್ರಮಣಕಾರಿ ಆಟವಾಡಿತು. ಈ ಅವಧಿಯ 62ನೇ ನಿಮಿಷದಲ್ಲಿ ಎದುರಾಳಿ ತಂಡದ ಮೂವರು ಡಿಫೆಂಡರ್ ಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ಬ್ರೆಜಿಲ್ ಆಟಗಾರ, ಚೆಂಡನ್ನು ಗೋಲು ಪೆಟ್ಟಿಗೆಯ ಬಳಿ ಇದ್ದ ಇನ್ನೋರ್ವ ಆಟಗಾರನಿಗೆ ನೀಡಿದ. ಅವರು ಗೋಲು ಬಾರಿಸಲು ಯತ್ನಿಸಿದರು. ಆದರೆ ಗೋಲಿ ಅದನ್ನು ತಡೆದರು. ಅಲ್ಲಿಯೆ ಇದ್ದ ರಿಚರ್ಲಿಸನ್ ಸಮಯ ಪ್ರಜ್ಞೆ ಮೆರೆದರು. ಪರಿಣಾಮ ಬ್ರೆಜಿಲ್ ಮೇಲುಗೈ ಸಾಧಿಸಿತು.
73ನೇ ನಿಮಿಷದಲ್ಲೀ ರಿಚರ್ಲಿಸನ್ ಮತ್ತೊಂದು ಗೋಲು ಬಾರಿಸಿದರು. ಪರಿಣಾಮ ಬ್ರೆಜಿಲ್ ಮುನ್ನಡೆ ಹಿಗ್ಗಿತು. ಕೊನೆಯ ಕ್ಷಣದವರೆಗೂ ಗೋಲು ಬಾರಿಸುವ ಎದುರಾಳಿ ತಂಡದ ಆಸೆ ಫಲಿಸಲಿಲ್ಲ. ಬ್ರೆಜಿಲ್ ಟೂರ್ನಿಯಲ್ಲಿ ಮೊದಲ ಜಯದ ನಗೆ ಬೀರಿತು.
FIFA, Brazil, Serbia, World Cup, Football