ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವಾರ್ನ್ ಅವರಿಗೆ ಗೌರವ ಸಲ್ಲಿಸಲಾಯಿತು.
ಪಂದ್ಯದ ಮೊದಲ ದಿನದಂದು 23 ಓವರ್‌ಗಳ ನಂತರ 23 ಸೆಕೆಂಡುಗಳ ಕಾಲ ಆಟವನ್ನು ನಿಲ್ಲಿಸಿ, ಎಲ್ಲರೂ ತಮ್ಮ ಸ್ಥಾನದಲ್ಲಿ ನಿಂತು ಚಪ್ಪಾಳೆ ತಟ್ಟಿದರು. ಈ ವೇಳೆ ಮೈದಾನದ ದೊಡ್ಡ ಪರದೆಯ ಮೇಲೆ ಶೇನ್ ವಾರ್ನ್ ಅವರ ವಿಡಿಯೋ ಕೂಡ ಪ್ಲೇ ಆಯಿತು.
ಆಸ್ಟ್ರೇಲಿಯಾದ ಪ್ರಸಿದ್ಧ ಸ್ಪಿನ್ನರ್ ಶೇನ್ ವಾರ್ನ್ 4 ಮಾರ್ಚ್ 2022 ರಂದು 52 ನೇ ವಯಸ್ಸಿನಲ್ಲಿ ನಿಧನರಾದರು. ಅವರ ನಿಧನದ ನಂತರ ಇಂಗ್ಲೆಂಡ್ ತಂಡ ಮೊದಲ ಬಾರಿಗೆ ತವರಿನಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಡುತ್ತಿದೆ. ಈ ಸಂದರ್ಭದಲ್ಲಿ ಆಟಗಾರರು ಸೇರಿದಂತೆ ಎಲ್ಲ ಪ್ರೇಕ್ಷಕರು 23 ಸೆಕೆಂಡುಗಳ ಕಾಲ ಚಪ್ಪಾಳೆ ತಟ್ಟಿ ವಾರ್ನ್‌ಗೆ ಗೌರವ ಸಲ್ಲಿಸಿದರು. ಈ ಚಪ್ಪಾಳೆ ಸದ್ದು, ಲಾರ್ಡ್ಸ್ ಕ್ರೀಡಾಂಗಣದಲ್ಲಿ ಪ್ರತಿಧ್ವನಿಸಿತು.
After 23 overs, the game pauses for 23 seconds of applause in memory of the the great Shane Warne 👏❤️ pic.twitter.com/zr2Ih2XK7o
— Sky Sports Cricket (@SkyCricket) June 2, 2022
23 ಓವರ್‌ಗಳ ನಂತರ ಆಟವನ್ನು ನಿಲ್ಲಿಸಿ 23 ಸೆಕೆಂಡುಗಳ ಕಾಲ ಚಪ್ಪಾಳೆ ತಟ್ಟಿದ್ದರ ಹಿಂದೆ ವಿಶೇಷ ಉದ್ದೇಶವಿತ್ತು. ವಾಸ್ತವವಾಗಿ, ಇದು ಶೇನ್ ವಾರ್ನ್ ತೊಡುತ್ತಿದ್ದ ಜೆರ್ಸಿ ಸಂಖ್ಯೆ 23 ಆಗಿತ್ತು. ಅವರು ಆಸ್ಟ್ರೇಲಿಯದ ಪರ, ಲೀಗ್ ತಂಡ ಯಾವುದೇ ತಂಡದ ಪರ ಆಡಿದರೂ ಅವರು 23 ನಂಬರ್ ಜೆರ್ಸಿಯನ್ನು ಧರಿಸುತ್ತಿದ್ದರು. ಶೇನ್ ವಾರ್ನ್ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ 23 ನಂಬರ್ ಜೆರ್ಸಿ ಧರಿಸಿ ಆಡಿದ್ದರು. ಶೇನ್ ವಾರ್ನ್ ಅವರು ತಮ್ಮ ನೆಚ್ಚಿನ ಫುಟ್‌ಬಾಲ್ ಆಟಗಾರ ಡರ್ಮಟ್ ಬ್ರೆರೆಟನ್ ಅವರ ಗೌರವಾರ್ಥವಾಗಿ ಈ ಜರ್ಸಿ ಸಂಖ್ಯೆಯನ್ನು ಧರಿಸುತ್ತಿದ್ದರು ಮತ್ತು ನಂತರ ಈ ಸಂಖ್ಯೆಯು ಅವರ ಗುರುತಾಯಿತು.
ಲಾರ್ಡ್ಸ್ ಕ್ರಿಕೆಟ್ ಮೈದಾನವು ಶೇನ್ ವಾರ್ನ್‌ಗೆ ಗೌರವ ಸಲ್ಲಿಸಲು ತನ್ನ ಕಾಮೆಂಟರಿ ಬಾಕ್ಸ್‌ನ ಹೆಸರನ್ನು ಸಹ ಬದಲಾಯಿಸಿದೆ. ಇದನ್ನು ಈಗ ‘ದಿ ಶೇನ್ ವಾರ್ನ್ ಕಾಮೆಂಟರಿ ಬಾಕ್ಸ್’ ಎಂದು ಕರೆಯಲಾಗುವುದು.
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳೆಂದು ಪರಿಗಣಿಸಲಾಗಿದೆ. ಆದಾಗ್ಯೂ, ಇಂಗ್ಲೆಂಡ್ ವಿರುದ್ಧ ಶೇನ್ ವಾರ್ನ್ ಅವರ ಪ್ರದರ್ಶನವು ಎಷ್ಟು ಅದ್ಭುತವಾಗಿದೆ ಎಂದರೆ ಅವರಿಗೆ ಇಂಗ್ಲೆಂಡ್‌ನಲ್ಲೂ ಸಾಕಷ್ಟು ಅಭಿಮಾನಿಗಳು ಇದ್ದರು. ಇಂಗ್ಲೆಂಡ್ ವಿರುದ್ಧ ಆಡಿದ 36 ಟೆಸ್ಟ್ ಪಂದ್ಯಗಳಲ್ಲಿ ಶೇನ್ ವಾರ್ನ್ 23.26 ಸರಾಸರಿಯಲ್ಲಿ 195 ವಿಕೆಟ್ ಪಡೆದಿದ್ದಾರೆ. ಈ ಪ್ರದರ್ಶನ ಇಂಗ್ಲೆಂಡ್‌ನ ಪ್ರೇಕ್ಷಕರನ್ನೂ ಅವರ ಅಭಿಮಾನಿಯನ್ನಾಗಿ ಮಾಡಿದೆ.