ಆಕ್ರಮಣಕಾರಿ ಬೌಲಿಂಗ್ ಮೂಲಕ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಆಟಕ್ಕೆ ಬ್ರೇಕ್ ಹಾಕಿದ ಇಂಗ್ಲೆಂಡ್‌ನ ಎಡಗೈ ವೇಗದ ಬೌಲರ್ ರೀಸ್ ಟಾಪ್ಲಿ(6/24) ತಮ್ಮ ವೃತ್ತಿ ಬದುಕಿನ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ODI ಪಂದ್ಯದಲ್ಲಿ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಟಾಪ್ಲಿ, ಇಂಗ್ಲೆಂಡ್ ಗೆಲುವಿನ ರೂವಾರಿಯಾಗಿ ಮಿಂಚಿದರು. ಭಾರತದ ಬ್ಯಾಟಿಂಗ್ ಆರಂಭವಾದ ಮೊದಲ ಓವರ್‌ನಿಂದಲೇ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ಎಡಗೈ ವೇಗಿ, ಟೀಂ ಇಂಡಿಯಾದ ರನ್‌ಗಳಿಕೆಯ ಓಟಕ್ಕೆ ಬ್ರೇಕ್ ಹಾಕಿದರು.

ಭಾರತದ ಬ್ಯಾಟಿಂಗ್ ಅಸ್ತ್ರಗಳಾದ ರೋಹಿತ್ ಶರ್ಮ(0), ಶಿಖರ್ ಧವನ್(9), ಸೂರ್ಯಕುಮಾರ್ ಯಾದವ್(27), ಹಾರ್ದಿಕ್ ಪಾಂಡ್ಯ(29), ಮೊಹಮ್ಮದ್ ಶಮಿ(23) ಹಾಗೂ ಕೊನೆಯಲ್ಲಿ ಪ್ರಸಿದ್ಧ್ ಕೃಷ್ಣ(0) ಅವರುಗಳಿಗೆ ಪೆವಿಲಿಯನ್ ದಾರಿ ತೋರಿದ ರೀಸ್ ಟಾಪ್ಲಿ, ಟೀಂ ಇಂಡಿಯಾದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಎಡಗೈ ವೇಗದ ಬೌಲರ್, ಇಂಗ್ಲೆಂಡ್ ಪರ ODI ಕ್ರಿಕೆಟ್‌ನ ಸರ್ವಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದರು. ಅಲ್ಲದೇ ಆಂಗ್ಲರ ಪರ ಏಕದಿನ ಕ್ರಿಕೆಟ್‌ನಲ್ಲಿ 6 ವಿಕೆಟ್‌ಗಳನ್ನ ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆ ಪಡೆದರು.
ಟಾಪ್ಲಿ ಅವರ ಟಾಪ್ ಕ್ಲಾಸ್ ಬೌಲಿಂಗ್ ಪ್ರದರ್ಶನದ ನೆರವಿನಿಂದ 2ನೇ ಏಕದಿನ ಪಂದ್ಯದಲ್ಲಿ 100 ರನ್‌ಗಳ ಭರ್ಜರಿ ಗೆಲುವು ಸಾಧಿಸಿರುವ ಇಂಗ್ಲೆಂಡ್, ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ. ಹೀಗಾಗಿ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದ ರೋಚಕತೆ ಹೆಚ್ಚಿದ್ದು, ಮ್ಯಾಂಚೆಸ್ಟರ್ ಅಂಗಳದಲ್ಲಿ ಜು.17ರ ಭಾನುವಾರ ನಡೆಯುವ ಕೊನೆಯ ಪಂದ್ಯದಲ್ಲಿ ಎರಡು ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿವೆ.
ENG vs IND : ಆಂಗ್ಲರ ಪರ ಹೊಸ ದಾಖಲೆ ಬರೆದ ಟಾಪ್ಲಿ…