ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ಗುರುವಾರ ಇಂಗ್ಲೆಂಡ್ ಹಾಗೂ ನ್ಯೂಜಿ಼ಲೆಂಡ್ ಬೌಲರ್ಗಳ ಪರಾಕ್ರಮ ಜೋರಾಗಿತ್ತು. ಉಭಯ ತಂಡಗಳ ನಡುವೆ ಆರಂಭಗೊಂಡ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ 17 ವಿಕೆಟ್ ಗಳು ಪತನಗೊಂಡವು. ಬೌಲರ್ಗಳ ಅದ್ಭುತ ಪ್ರದರ್ಶನದ ಮುಂದೆ ಎರಡು ತಂಡಗಳ ಬ್ಯಾಟ್ಸ್ಮನ್ಗಳು ಉತ್ತರವಿಲ್ಲದೇ ಪರದಾಡಿದರು.
ಲಾರ್ಡ್ಸ್ ಮೈದಾನದಲ್ಲಿ ಗುರುವಾರ ಆರಂಭಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿತು. ಆದರೆ ಆಂಗ್ಲರ ಬೌಲಿಂಗ್ ದಾಳಿಗೆ ತತ್ತರಿಸಿದ ಕಿವೀಸ್, ಮೊದಲ ಇನ್ನಿಂಗ್ಸ್ ನಲ್ಲಿ 132 ರನ್ಗಳಿಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್, ಮಧ್ಯಮ ಕ್ರಮಾಂಕದ ವೈಫಲ್ಯದಿಂದ ದಿನದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿದೆ. ಆ ಮೂಲಕ 16 ರನ್ಗಳ ಹಿನ್ನಡೆಯೊಂದಿಗೆ ದಿನದಾಟ ಮುಗಿಸಿದೆ.
*ಆಂಡರ್ಸನ್-ಪಾಟ್ಸ್ ಮಿಂಚು*
ಮೊದಲು ಬೌಲಿಂಗ್ ಅವಕಾಶ ಪಡೆದ ಇಂಗ್ಲೆಂಡ್ ತಂಡಕ್ಕೆ ಅನುಭವಿ ಜೇಮ್ಸ್ ಆಂಡರ್ಸನ್ ಹಾಗೂ ಚೊಚ್ಚಲ ಪಂದ್ಯವಾಡುತ್ತಿರುವ ಮ್ಯಾಟ್ ಪಾಟ್ಸ್ ತಲಾ 4 ವಿಕೆಟ್ಸ್ ಪಡೆದು ಮಿಂಚಿದರು. ಇನ್ನಿಂಗ್ಸ್ ಆರಂಭದಿಂದಲೇ ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿದ ಈ ಜೋಡಿ, ಕೇನ್ ವಿಲಿಯಂಸನ್ ಪಡೆಯ ಬ್ಯಾಟಿಂಗ್ ಬೆನ್ನೆಲು ಮುರಿದರು. ಇವರಿಗೆ ತಕ್ಕ ಸಾಥ್ ನೀಡಿದ ಸ್ಟುವರ್ಟ್ ಬ್ರಾಡ್ ಹಾಗೂ ಬೆನ್ ಸ್ಟೋಕ್ಸ್ ತಲಾ 1 ವಿಕೆಟ್ಸ್ ಪಡೆದರು.
*ಕಿವೀಸ್ ಬ್ಯಾಟಿಂಗ್ ವೈಫಲ್ಯ*
ಮೊದಲು ಬ್ಯಾಟಿಂಗ್ ಆರಂಭಿಸಿದ ಕಿವೀಸ್ ಬ್ಯಾಟಿಂಗ್ ವೈಫಲ್ಯ ಕಂಡಿತು. ನಾಯಕ ವಿಲಿಯಂಸನ್ ಸೇರಿದಂತೆ ಅಗ್ರ ಕ್ರಮಾಂಕದ ಯಾವ ಬ್ಯಾಟ್ಸ್ಮನ್ ಸಹ ತಂಡಕ್ಕೆ ಆಸರೆ ಆಗಲಿಲ್ಲ. ಆದರೆ ಪ್ರಮುಖ ಬ್ಯಾಟ್ಸ್ಮನ್ ಗಳ ವೈಫಲ್ಯದ ನಡುವೆಯೂ ಕೆಳ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕಾಲಿನ್ ಡಿ’ಗ್ರ್ಯಾಂಡ್ಹೊಮ್ 42(50), ಟಿಮ್ ಸೌಥಿ 26(23) ಉಪಯುಕ್ತ ಬ್ಯಾಟಿಂಗ್ ಮೂಲಕ ನೆರವಾದರು. ಪರಿಣಾಮ ಶತಕದ ಗಡಿದಾಟಿದ ಕಿವೀಸ್ 132 ರನ್ಗಳಿಗೆ ಸರ್ವಪತನ ಕಂಡಿತು.
*ಇಂಗ್ಲೆಂಡ್ ನಾಟಕೀಯ ಕುಸಿತ*
ಬೌಲಿಂಗ್ ನಲ್ಲಿ ಪ್ರಾಬಲ್ಯ ಮೆರೆದ ಇಂಗ್ಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿದ ಅಲೆಕ್ಸ್ ಲೀಸ್ 25(77) ಹಾಗೂ ಜ್ಯಾಕ್ ಕ್ರಾವ್ಲೆ 43(56) ಮೊದಲ ವಿಕೆಟ್ಗೆ 59 ರನ್ ಗಳ ಭರ್ಜರಿ ಆರಂಭ ನೀಡಿದರು. ಆದರೆ ನಂತರದಲ್ಲಿ ನಾಟಕೀಯ ಕುಸಿತ ಕಂಡ ಆಂಗ್ಲರ ಪಡೆ, ಕೇವಲ 25 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಭಾರೀ ಆಘಾತ ಕಂಡಿತು. ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ಬೆನ್ ಸ್ಟೋಕ್ಸ್(1) ಸೇರಿದಂತೆ ಯಾವುದೇ ಆಟಗಾರರು ನೆಲಕಚ್ಚಿ ಆಡಲಿಲ್ಲ. ಸದ್ಯ ದಿನದಂತ್ಯಕ್ಕೆ 116ಕ್ಕೆ 7 ವಿಕೆಟ್ ಕಳೆದುಕೊಂಡಿರುವ ಇಂಗ್ಲೆಂಡ್, 16 ರನ್ಗಳ ಹಿನ್ನಡೆಯೊಂದಿಗೆ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
*ಕಿವೀಸ್ ಸಂಘಟಿತ ದಾಳಿ*
ಬ್ಯಾಟಿಂಗ್ ವೈಫಲ್ಯ ಕಂಡ ನ್ಯೂಜಿ಼ಲೆಂಡ್ ತಂಡಕ್ಕೆ ಬೌಲರ್ಗಳು ಕೈಹಿಡಿದರು. ಸಂಘಟಿತ ಬೌಲಿಂಗ್ ದಾಳಿ ಮೂಲಕ ಅತಿಥೇಯ ತಂಡದ ಬ್ಯಾಟಿಂಗ್ ಬೆನ್ನೆಲು ಮುರಿದ ಕಿವೀಸ್ ಪರ ಟಿಮ್ ಸೌಥಿ, ಟ್ರೆಂಟ್ ಬೋಲ್ಟ್ ಹಾಗೂ ಕೈಲ್ ಜೆಮಿಸನ್ ತಲಾ 2 ವಿಕೆಟ್ ಪಡೆದರೆ, ಗ್ರ್ಯಾಂಡ್ಹೋಮ್ 1 ವಿಕೆಟ್ ಪಡೆದರು.