ಅತಿಥೇಯ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ತಂಡವನ್ನ ಮುನ್ನಡೆಸುವವರು ಯಾರು? ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಈ ನಡುವೆ ರೋಹಿತ್ ಅಲಭ್ಯತೆ ಕುರಿತು ಪ್ರತಿಕ್ರಿಯಿಸಿರುವ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, 5ನೇ ಟೆಸ್ಟ್‌ನಿಂದ ರೋಹಿತ್ ಶರ್ಮ ಇನ್ನೂ ಹೊರಗುಳಿದಿಲ್ಲ ಎಂದಿದ್ದಾರೆ.
ಈ ಕುರಿತು ವರ್ಚುಯಲ್ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಮಾತನಾಡಿರುವ ಹೆಡ್ ಕೋಚ್ ರಾಹುಲ್ ದ್ರಾವಿಡ್, ರೋಹಿತ್ ಶರ್ಮ ಅವರ ಆರೋಗ್ಯದ ಬಗ್ಗೆ ವೈದ್ಯಕೀಯ ತಂಡದಿಂದ ನಿಗಾವಹಿಸಲಾಗಿದ್ದು, ಈವರೆಗೂ ಅವರು 5ನೇ ಪಂದ್ಯದಿಂದ ಹೊರಗುಳಿದಿಲ್ಲ. ಖಂಡಿತವಾಗಿಯೂ ಅಂತಿಮ ಟೆಸ್ಟ್‌ನಲ್ಲಿ ಕಣಕ್ಕಿಳಿಯಲು ನೆಗೆಟಿವ್ ರಿಪೋರ್ಟ್ ಬರೆಬೇಕಿದೆ. ಪಂದ್ಯದ ಆರಂಭಕ್ಕೆ ಇನ್ನೂ ಸಮಯವಿದ್ದು, ಮತ್ತೊಂದು ಬಾರಿ ರೋಹಿತ್ ಶರ್ಮ ಅವರಿಗೆ ಕೋವಿಡ್-19 ಟೆಸ್ಟ್ ಮಾಡಲಾಗುತ್ತದೆ. ಈ ಕುರಿತು ವೈದ್ಯಕೀಯ ತಂಡ ಹಾಗೂ ಸ್ಪೋರ್ಟ್ಸ್ ಸೈನ್ಸ್ ತಂಡ ನಿರ್ಧರಿಸಲಿದ್ದು, ಈ ಬಗ್ಗೆ ಹೆಚ್ಚಿನ ನಿಗಾವಹಿಸುವುದಾಗಿ ತಿಳಿಸಿದ್ದಾರೆ.
ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ರೋಹಿತ್ ಶರ್ಮ ಜೂ.25ರಂದು ನಡೆಸಿದ ರಾಪಿಡ್ ಆಂಟಿಜನ್ ಟೆಸ್ಟ್ ಸಂದರ್ಭದಲ್ಲಿ ಕೋವಿಡ್-19 ಪಾಸಿಟಿವ್ ವರದಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ನಾಯಕ ಹೋಟೆಲ್‌ನಲ್ಲಿ ಐಸೋಲೇಟ್ ಆಗಿದ್ದು, ಬಿಸಿಸಿಐ ವೈದ್ಯಕೀಯ ತಂಡ ರೋಹಿತ್ ಶರ್ಮ ಅವರ ಆರೋಗ್ಯದ ಬಗ್ಗೆ ನಿಗಾವಹಿಸುತ್ತಿದೆ.
ಈ ನಡುವೆ ಆಂಗ್ಲರ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿದ್ದು, ಕೋವಿಡ್-19 ಸೋಂಕಿಗೆ ತುತ್ತಾಗಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮ ಅನುಪಸ್ಥಿತಿಯಲ್ಲಿ ತಂಡವನ್ನ ಮುನ್ನಡೆಸುವವರು ಯಾರು? ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದೆ. ರೋಹಿತ್ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರ, ಟೀಂ ಇಂಡಿಯಾವನ್ನ ಮುನ್ನಡೆಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮತ್ತೊಂದೆಡೆ ರೋಹಿತ್ ಶರ್ಮ ಲಭ್ಯತೆ ಬಗ್ಗೆ ಅಂತಿಮ ಚಿತ್ರಣ ದೊರೆಯುವ ಮುನ್ನವೇ, ಭಾರತೀಯ ಕ್ರಿಕೆಟ್ ಮಂಡಳಿ ಬದಲಿ ಆಟಗಾರನಾಗಿ ಮಯಂಕ್ ಅಗರ್ವಾಲ್ ಅವರನ್ನ ಆಯ್ಕೆ ಮಾಡಿದೆ.