ರಿಷಬ್ ಪಂತ್(Rishabh Pant)(125*) ಅಮೋಘ ಶತಕ ಹಾಗೂ ಹಾರ್ದಿಕ್ ಪಾಂಡ್ಯ(Hardik Pandya)(71) ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್(England) ವಿರುದ್ಧದ ಮೂರನೇ ODI ಪಂದ್ಯದಲ್ಲಿ 5 ವಿಕೆಟ್‌ಗಳ ಗೆಲುವು ಸಾಧಿಸಿದ ಟೀಂ ಇಂಡಿಯಾ(Team India), ಸರಣಿ ಮುಡಿಗೇರಿಸಿಕೊಂಡಿತು. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲವಾದ ಇಂಗ್ಲೆಂಡ್ 45.5 ಓವರ್‌ಗಳಲ್ಲಿ 259 ರನ್‌ಗಳಿಗೆ ಆಲೌಟ್ ಆಯಿತು. ಈ ಟಾರ್ಗೆಟ್ ಚೇಸ್ ಮಾಡಿದ ಭಾರತ 42.1 ಓವರ್‌ಗಳಲ್ಲಿ 261/5 ರನ್‌ಗಳಿಸುವ ಮೂಲಕ ಜಯದ ನಗೆಬೀರಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 2-1ರ ಅಂತರದಿಂದ ODI ಸರಣಿ ವಶಪಡಿಸಿಕೊಂಡಿತು.

ಪಾಂಡ್ಯ-ಚಹಲ್ ಮೋಡಿ:
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ ಹಾರ್ದಿಕ್ ಪಾಂಡ್ಯ(4/24) ಹಾಗೂ ಯುಜು಼ವೇಂದ್ರ ಚಹಲ್(3/60) ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ಇದರ ಪರಿಣಾಮ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದ ಇಂಗ್ಲೆಂಡ್ ಪರ ನಾಯಕ ಜೋಸ್ ಬಟ್ಲರ್(60) ಅರ್ಧಶತಕದ ಜೊತೆಗೆ ಜೇಸನ್ ರಾಯ್(41), ಮೊಯಿನ್ ಅಲಿ(34) ಹಾಗೂ ಕ್ರೇಗ್ ಓವರ್ಟನ್(32) ಜವಾಬ್ದಾರಿಯುತ ಆಟವಾಡಿದರು. ಆದರೆ ಭಾರತದ ಬೌಲಿಂಗ್ ದಾಳಿಗೆ ಸಿಲುಕಿದ ಬೈರ್ಸ್ಟೋವ್(0), ಜೋ ರೂಟ್(0) ಖಾತೆ ತೆರೆಯುವ ಮೊದಲೇ ಪೆವಿಲಿಯನ್ ಸೇರಿದರೆ. ಬೆನ್ ಸ್ಟೋಕ್ಸ್(27), ಲಿವಿಂಗ್‌ಸ್ಟೋನ್(27) ಹಾಗೂ ವಿಲ್ಲಿ(18) ಅಲ್ಪಮೊತ್ತದ ಕಾಣಿಕೆ ನೀಡಿದರು. ಪರಿಣಾಮ ಇಂಗ್ಲೆಂಡ್ 259 ರನ್‌ಗಳಿಗೆ ಆಲೌಟ್ ಆಯಿತು.
ಕೈಕೊಟ್ಟ ಅಗ್ರಕ್ರಮಾಂಕ:
ಇಂಗ್ಲೆಂಡ್ ನೀಡಿದ 260 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಭಾರತ ಕೂಡ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮ(17), ಶಿಖರ್ ಧವನ್(1) ಬಹುಬೇಗನೆ ನಿರ್ಗಮಿಸಿದರೆ. ಇವರ ಬೆನ್ನಲ್ಲೇ ವಿರಾಟ್ ಕೊಹ್ಲಿ(17) ಮತ್ತೊಮ್ಮೆ ನಿರಾಸೆ ಮೂಡಿಸಿದರು. ಈ ವೇಳೆ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್(16) ಕೂಡ ತಂಡಕ್ಕೆ ಆಸರೆಯಾಗಲಿಲ್ಲ. ಪರಿಣಾಮ 72ಕ್ಕೆ 5 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿತ್ತು.
ಪಂತ್ ಶತಕದ ಅಬ್ಬರ:
ಈ ಹಂತದಲ್ಲಿ ಜೊತೆಯಾದ ರಿಷಬ್ ಪಂತ್(125*) ಹಾಗೂ ಹಾರ್ದಿಕ್ ಪಾಂಡ್ಯ(71) ಭರ್ಜರಿ ಆಟವಾಡಿದರು. 5ನೇ ವಿಕೆಟ್‌ಗೆ ಜೊತೆಯಾದ ಈ ಇಬ್ಬರು ಇಂಗ್ಲೆಂಡ್ ಬೌಲಿಂಗ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದರು. 5ನೇ ವಿಕೆಟ್‌ಗೆ 133 ರನ್‌ಗಳ ಅದ್ಭುತ ಜೊತೆಯಾಟವಾಡಿದ ಈ ಇಬ್ಬರು ಟೀಂ ಇಂಡಿಯಾದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಅದ್ಭುತ ಆಟವಾಡಿದ ರಿಷಬ್ ಪಂತ್, ಭರ್ಜರಿ ಶತಕ ಸಿಡಿಸಿ ಮಿಂಚಿದರೆ, ಪಾಂಡ್ಯ ಆಕರ್ಷಕ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಅಂತಿಮವಾಗಿ ಭಾರತ 42.1 ಓವರ್‌ಗಳಲ್ಲಿ 261 ರನ್‌ಗಳಿಸಿ ಜಯಭೇರಿ ಬಾರಿಸಿತು. ಇಂಗ್ಲೆಂಡ್ ಪರ ರೀಸ್ ಟಾಪ್ಲೀ 3 ವಿಕೆಟ್ ಪಡೆದರೆ, ಕ್ರೀಸ್ ಮತ್ತು ಓವರ್ಟನ್ ತಲಾ 1 ವಿಕೆಟ್ ಪಡೆದರು. ಅಂತಿಮ ಪಂದ್ಯದಲ್ಲಿ ಶತಕ ಸಿಡಿಸಿದ ರಿಷಬ್ ಪಂತ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.