ಫಾರ್ಮ್ ಸಮಸ್ಯೆಯಿಂದ ಟೀಂ ಇಂಡಿಯಾದ ಟೆಸ್ಟ್ ತಂಡದಿಂದ ಹೊರಗುಳಿದಿರುವ ಹಾಗೂ ಐಪಿಎಲ್ ಟೂರ್ನಿಯಲ್ಲಿ ಯಾವ ತಂಡಕ್ಕೂ ಬೇಡವಾಗಿದ್ದ ಭಾರತ ಕ್ರಿಕೆಟ್ ತಂಡದ ಅನುಭವಿ ಆಟಗಾರ ಚೇತೇಶ್ವರ್ ಪುಜಾರ ಇದೀಗ ಕೌಂಟಿ ಕ್ರಿಕೆಟ್ನತ್ತ ಮುಖ ಮಾಡಿದ್ದಾರೆ.
ಇಂಗ್ಲಿಷ್ ಕೌಂಟಿ ಚಾಂಪಿಯನ್ಷಿಪ್ನಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಹಾಗೂ ರಾಯಲ್ ಲಂಡನ್ ಏಕದಿನ ಪಂದ್ಯಾವಳಿಯಲ್ಲಿ ಭಾಗವಹಿಸಲು ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಸಜ್ಜಾಗಿದ್ದು, ಸಸೆಕ್ಸ್ ತಂಡದ ಪರವಾಗಿ ಪುಜಾರ ಸಹಿ ಹಾಕಿದ್ದಾರೆ. ಈ ಹಿಂದೆ ಯಾರ್ಕ್ಶೈರ್ ಪರವಾಗಿ ಕೌಂಟಿ ಕ್ರಿಕೆಟ್ನಲ್ಲಿ ಕಣಕ್ಕಿಳಿದಿದ್ದ ಚೇತೇಶ್ವರ್ ಪುಜಾರ, 2020ರಲ್ಲಿ ಗ್ಲೌಸ್ಟರ್ಶೈರ್ ಪರವಾಗಿ ಆರು ಪಂದ್ಯಗಳನ್ನು ಆಡಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ ಕೋವಿಡ್-19 ಕಾರಣದಿಂದ ಈ ಒಪ್ಪಂದ ರದ್ದಾಗಿತ್ತು. ಇದೀಗ ಮತ್ತೊಮ್ಮೆ ಕೌಂಟಿ ಕ್ರಿಕೆಟ್ ಆಡುವ ಅವಕಾಶ ಪಡೆದಿರುವ ಪುಜಾರ, ಈ ಬಾರಿ ಸಸೆಕ್ಸ್ ತಂಡದ ಮೂಲಕ ಇಂಗ್ಲಿಷ್ ಸಮ್ಮರ್ನಲ್ಲಿ ಕಣಕ್ಕಿಳಿಯಲಿದ್ದಾರೆ.
ಟೀಂ ಇಂಡಿಯಾ ಟೆಸ್ಟ್ ತಂಡದ ಕಾಯಂ ಸದಸ್ಯ ಎನಿಸಿದ್ದ ಚೇತೇಶ್ವರ್ ಪುಜಾರ, ಇತ್ತೀಚಿಗೆ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಇದೇ ಕಾರಣದಿಂದ ಪ್ರಸ್ತುತ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಪುಜಾರ ಅವರನ್ನ ಕೈಬಿಡಲಾಗಿತ್ತು. ಇದೇ ಕಾರಣದಿಂದಾಗಿ ಪ್ರಸ್ತುತ ನಡೆಯುತ್ತಿರುವ 2021-2022ನೇ ಸಾಲಿನ ರಣಜಿ ಕ್ರಿಕೆಟ್ನಲ್ಲಿ ಚೇತೇಶ್ವರ್ ಪುಜಾರ ಆಡುತ್ತಿದ್ದಾರೆ.
ಮತ್ತೊಂದೆಡೆ ಈ ಬಾರಿಯ ಐಪಿಎಲ್ನಲ್ಲಿ ಆಡುವ ಅವಕಾಶ ಸಹ ಪುಜಾರ ಅವರಿಗೆ ಲಭಿಸಿಲ್ಲ. ಕಳೆದ ಬಾರಿ ಸಿಎಸ್ಕೆ ತಂಡದಲ್ಲಿದ್ದ ಚೇತೇಶ್ವರ್ ಪುಜಾರ ಅವರನ್ನ ಈ ಬಾರಿಯ ಮೆಗಾ ಹರಾಜಿನಲ್ಲಿ ಯಾವ ಫ್ರಾಂಚೈಸಿ ಕೂಡ ಖರೀದಿಸಲಿಲ್ಲ. ಈ ಎಲ್ಲಾ ಕಾರಣದಿಂದಾಗಿ ಟೀಂ ಇಂಡಿಯಾದ ಅನುಭವಿ ಆಟಗಾರ, ಕೌಂಟಿ ಕ್ರಿಕೆಟ್ನತ್ತ ಮುಖ ಮಾಡುವಂತೆ ಮಾಡಿದೆ. ಸಸೆಕ್ಸ್ ತಂಡದಲ್ಲಿದ್ದ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅವರ ಸ್ಥಾನವನ್ನ ಇದೀಗ ಚೇತೇಶ್ವರ್ ಪುಜಾರ ತುಂಬಲಿದ್ದಾರೆ.