ಕೊನೆಯ ಕ್ಷಣದವರೆಗೂ ರೊಚಕತೆ ಹುಟ್ಟಿಸಿದ್ದ ಎಂಟನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ನ 101ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಹಾಗೂ ತೆಲುಗು ಟೈಟಾನ್ಸ್ ತಂಡಗಳು ಅಂಕವನ್ನು ಹಂಚಿಕೊಂಡಿದೆ.
ಬೆಂಗಳೂರಿನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟೈಟಾನ್ಸ್ 32 ಅಂಕ ಕಲೆ ಹಾಕಿದರೆ, ಬೆಂಗಾಲ್ ಇಷ್ಟೇ ಅಂಕ ಸೇರಿಸಿತು. ಈ ಪಂದ್ಯದ ಬಳಿಕ ತೆಲುಗು 26 ಅಂಕಗಳಿಂದ ಕೊನೆಯ ಸ್ಥಾನ, ಬೆಂಗಾಲ್ 44 ಅಂಕಗಳೊಂದಿಗೆ 10ನೇ ಸ್ಥಾನ ಹೊಂದಿದೆ.
ಬೆಂಗಾಲ್ ವರ ಮಣಿಂದರ್ ಸಿಂಘ್ 11, ಮನೋಜ್ 6 ಅಂಕ ಕಲೆ ಹಾಕಿದರೆ, ಟೈಟಾನ್ಸ್ ಪರ ರಜನಿಶ್ 7, ಅಂಕಿತ್ ಬೆನಿವಾಲ್ 9 ಅಂಕ ಸಂಪಾದಿಸಿದರು.
ಉಭಯ ತಂಡಗಳು ಜಿದ್ದಾಜಿದ್ದಿನ ಆಟವನ್ನು ಪ್ರದರ್ಶಿಸಿದವು. ಬೆಂಗಾಲ್ 37 ಬಾರಿ ದಾಳಿ ನಡೆಸಿ 12 ಅಂಕ ಕಲೆ ಹಾಕಿದರೆ, ಟೈಟಾನ್ಸ್ 38 ಬಾರಿ ಎದುರಾಳಿ ಕೋರ್ಟ್ ಗೆ ಎಂಟ್ರಿ ನೀಡಿ 15 ಅಂಕ ಬಾಚಿಕೊಂಡಿತು. ಈ ವೇಳೆ ಬೆಂಗಾಲ್ ಒಂದು ಬಾರಿ ಸೂಪರ್ ರೈಡ್ ನಡೆಸಿತು. ಟೈಟಾನ್ಸ್ ತಂಡದ ರಕ್ಷಣಾ ವಿಭಾಗ ಬಲಾಢ್ಯವಾಗಿತ್ತು. 24 ಬಾರಿ ಎದುರಾಳಿ ಆಟಗಾರರನ್ನು ಹಿಡಿಯುವ ಯತ್ನದಲ್ಲಿ ಟೈಟಾನ್ಸ್ 10 ಬಾರಿ ಯಶ ಕಂಡಿತು. ಈ ಅಂಕಿ ಅಂಶದಲ್ಲಿ ಬೆಂಗಾಲ್ 6 ಅಂಕ ಸೇರಿಸಿತು. ಉಭಯ ತಂಡಗಳು ತಲಾ ಒಂದೊಂದು ಬಾರಿ ಆಲೌಟ್ ಆದವು.