ಎಡಗೈ ಸ್ಪಿನ್ನರ್ ನಸುಮ್ ಅಹ್ಮೆದ್(4/12) ಪರಿಣಾಮಕಾರಿ ಬೌಲಿಂಗ್ ಹಾಗೂ ಲಿಟ್ಟನ್ ದಾಸ್(60) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಅಫ್ಘಾನಿಸ್ತಾನ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 61 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಢಾಕಾದಲ್ಲಿ ಗುರುವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ, 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ಆಫ್ಘಾನಿಸ್ಥಾನ, 17.4 ಓವರ್ಗಳಲ್ಲಿ 94 ರನ್ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 61 ರನ್ಗಳ ಗೆಲುವು ಸಾಧಿಸಿದ ಬಾಂಗ್ಲಾ, ಎರಡು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸುವ ಜೊತೆಗೆ ಟಿ20 ಪಂದ್ಯದಲ್ಲಿ ಸತತ ಸೋಲಿನ ಸುಳಿಯಿಂದ ಹೊರ ಬಂದಿತು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ, ಬ್ಯಾಟಿಂಗ್ ವೈಫಲ್ಯ ಎದುರಿಸಿತು. 50 ರನ್ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಬಾಂಗ್ಲಾದೇಶ ತಂಡಕ್ಕೆ, ಲಿಟ್ಟನ್ ದಾಸ್ ಆಸರೆಯಾದರು. ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದ ಲಿಟ್ಟನ್ ದಾಸ್ ಆಕರ್ಷಕ ಅರ್ಧಶತಕ ಬಾರಿಸಿ, ತಂಡದ ಮೊತ್ತವನ್ನು 150ರ ಗಡಿದಾಟಿಸಿದರು. ಇವರಿಗೆ ಸಾಥ್ ನೀಡಿದ ಅಫೀಫ್ ಹೊಸೈನ್ 25 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು. ಅಫ್ಘಾನ್ ಪರ ಫರೂಕಿ ಹಾಗೂ ಒಮರ್ಝಾಯ್ ತಲಾ 2 ವಿಕೆಟ್ ಪಡೆದರು.
ಆದರೆ ಅಫ್ಘಾನಿಸ್ತಾನದ ಪ್ರಮುಖ ಸ್ಪಿನ್ ಅಸ್ತ್ರವಾಗಿದ್ದ ರಶೀದ್ ಖಾನ್, ಮುಜೀಬ್ ಉರ್ ರಹಮಾನ್ ಹಾಗೂ ಮೊಹಮ್ಮದ್ ನಬಿ ಯಾವುದೇ ಕಮಾಲ್ ಮಾಡಲಿಲ್ಲ. ಸ್ಪಿನ್ ತ್ರಿವಳಿಗಳ ಪೈಕಿ ರಶೀದ್ ಖಾನ್ ಕೇವಲ 1 ವಿಕೆಟ್ ಪಡೆದರು.
ಬಾಂಗ್ಲಾ ನೀಡಿದ ಟಾರ್ಗೆಟ್ ಬೆನ್ನತ್ತಿದ ಅಫ್ಘಾನಿಸ್ತಾನ್ ಬ್ಯಾಟಿಂಗ್ ವೈಫಲ್ಯ ಕಂಡಿತು. ನಸುಮ್ ಅಹ್ಮೆದ್(4/12) ಸ್ಪಿನ್ ದಾಳಿಗೆ ತತ್ತರಿಸಿದ ಅಫ್ಘಾನ್ ಪಡೆ, ಕೇವಲ 94 ರನ್ಗಳಿಗೆ ಸರ್ವಪತನ ಕಂಡಿತು. ಇವರಿಗೆ ಉತ್ತಮ ಸಾಥ್ ನೀಡಿದ ಶೊರಿಫುಲ್ ಇಸ್ಲಾಂ(3/29) ಹಾಗೂ ಶಕೀಬ್ ಅಲ್ ಹಸನ್(2/18) ಎದುರಾಳಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ನಜೀಬುಲ್ಲಾ ಝದ್ರಾನ್ ಹಾಗೂ ಮೊಹಮ್ಮದ್ ನಬಿ 37 ರನ್ಗಳ ಜೊತೆಯಾಟವಾಡಿ ಸ್ವಲ್ಪಮಟ್ಟಿನ ಪ್ರತಿರೋಧ ತೋರಿದರೆ. ಚೊಚ್ಚಲ ಪಂದ್ಯವಾಡಿದ ಒಮರ್ಝಾಯ್ 20 ರನ್ಗಳಿಸಿದರು. ಉಭಯ ತಂಡಗಳ ನಡುವಿನ 2ನೇ ಟಿ20 ಪಂದ್ಯ ಮಾ.5ರಂದು ನಡೆಯಲಿದೆ.