ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ (Aus VS NZ) ನಡುವಿನ ಕಾದಾಟ ಇಂಡೋ-ಪಾಕ್ ಕದನದಷ್ಟೇ ರೋಚಕವಾಗಿರುತ್ತದೆ. ಕೇರ್ನ್ಸ್ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ (ODI) ಈ ಎರಡು ತಂಡಗಳು ಜಿದ್ದಾಜಿದ್ದಿ ನಡೆಸಿದ್ದವು. ಆದರೆ ಕೆಮರೂನ್ ಗ್ರೀನ್ (Cameroon Green) ಆಟ ಆಸ್ಟ್ರೇಲಿಯಾಕ್ಕೆ (Australia) 2 ವಿಕೆಟ್ಗಳ ರೋಚಕ ಜಯ ತಂದುಕೊಟ್ಟಿತ್ತು.
ಟಾಸ್ ಗೆದ್ದ ಆಸ್ಟ್ರೇಲಿಯಾ (Aus) ನ್ಯೂಜಿಲೆಂಡ್ (Newzealand) ತಂಡವನ್ನು ಬ್ಯಾಟಿಂಗ್ಗೆ ಇಳಿಸಿತು. ಮಾರ್ಟಿನ್ ಗಪ್ಟಿಲ್ 6 ರನ್ಗಳಿಸಿ ಮಿಚೆಲ್ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸಿದರು. ಡೆವೊನ್ ಕಾನ್ವೆ ಮತ್ತು ಕೇನ್ ವಿಲಿಯಮ್ಸನ್ ನಡುವೆ 81 ರನ್ಗಳ ಜೊತೆಯಾಟ ಬಂತು. 68 ಎಸೆತಗಳಲ್ಲಿ 4 ಫೋರ್ ಮತ್ತು 1 ಸಿಕ್ಸರ್ ನೆರವಿನಿಂದ 46 ರನ್ಗಳಿಸಿದ್ದ ಕಾನ್ವೆ ಝಂಪಾ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು. ದಾಳಿಗಿಳಿದ ಮ್ಯಾಕ್ಸ್ವೆಲ್ 45 ರನ್ಗಳಿಸಿದ್ದ ವಿಲಿಯಮ್ಸನ್ ವಿಕೆಟ್ ಕೂಡ ಹಾರಿಸಿದರು.
ಮ್ಯಾಕ್ಸ್ವೆಲ್ ಮೋಡಿ ಇಲ್ಲಿಗೆ ನಿಲ್ಲಲಿಲ್ಲ. 26 ರನ್ಗಳಿಸಿದ್ದ ಡೆರಿಲ್ ಮಿಚೆಲ್, 7 ರನ್ಗಳಿಸಿದ್ದ ಬ್ರೇಸ್ ವೆಲ್, 43 ರನ್ಗಳಿಸಿದ್ದ ಟಾಮ್ ಲೇಥಮ್ ಕೂಡ ವಿಕೆಟ್ ಒಪ್ಪಿಸಿದರು. ಸ್ಲಾಗ್ ಓವರುಗಳಲ್ಲಿ ಜೋಶ್ ಹ್ಯಾಜಲ್ವುಡ್ ಜೇಮ್ಸ್ ನೀಶಾಮ್ (16), ಮಿಚೆಲ್ ಸ್ಯಾಂಟ್ನರ್ (13) ಮತ್ತು ಮ್ಯಾಟ್ ಹೆನ್ರಿ (5) ವಿಕೆಟ್ ಪಡೆದರು. ನ್ಯೂಜಿಲೆಂಡ್ 50 ಓವರುಗಳಲ್ಲಿ 232 ರನ್ ಮಾತ್ರ ಗಳಿಸಿತ್ತು. ಮ್ಯಾಕ್ಸಿ 4 ವಿಕೆಟ್ ಪಡೆದರೆ, ಹ್ಯಾಜಲ್ವುಡ್ 3 ವಿಕೆಟ್ ಪಡೆದರು.
ಚೇಸಿಂಗ್ ಆರಂಭಿಸಿದ ಆಸ್ಟ್ರೇಲಿಯಾ 44 ರನ್ಗಳಾಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತ್ತು. ಟ್ರೆಂಟ್ ಬೋಲ್ಟ್ ಆರೋನ್ ಪಿಂಚ್ (5), ಸ್ಟೀವನ್ ಸ್ಮಿತ್ (1) ಮತ್ತು ಮಾರ್ನಸ್ ಲಬುಶಂಗೆ (0) ವಿಕೆಟ್ ಪಡೆದರು. ಮ್ಯಾನ್ ಹೆನ್ರಿ ಮಾರ್ಕಸ್ ಸ್ಟಾಯ್ನಿಸ್ (5) ಮತ್ತು ಡೇವಿಡ್ ವಾರ್ನರ್ (20) ವಿಕೆಟ್ ಹಾರಿಸಿದರು.
ಆಸ್ಟ್ರೇಲಿಯಾದ ಶಾಕಿಂಗ್ ಆರಂಭದಿಂದ ನ್ಯೂಜಿಲೆಂಡ್ (NZ) ಮ್ಯಾಚ್ ಗೆದ್ದಷ್ಟು ಸಂಭ್ರಮಿಸಿತ್ತು. ಆದರೆ ಅಲೆಕ್ಸ್ ಕ್ಯಾರಿ ಮತ್ತು ಕೆಮರೂನ್ ಗ್ರೀನ್ ನಡುವಿನ ಜೊತೆಯಾಟ ಲೆಕ್ಕಾಚಾರ ಬದಲಿಸಿತು. 6 ನೇ ವಿಕೆಟ್ಗೆ ಈ ಜೋಡಿ 158 ರನ್ಗಳ ಜೊತೆಯಾಟ ತಂದಿತ್ತು. ಅಲೆಕ್ಸ್ ಕ್ಯಾರಿ 85 ರನ್ಗಳಿಸಿ ಔಟಾದರು. ಅಂತಿಮ ಹಂತದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ (2) ಮತ್ತು ಮಿಚೆಲ್ ಸ್ಟಾರ್ಕ್ (1) ವಿಕೆಟ್ ಬೇಗನೆ ಕಳೆದುಕೊಂಡಿತು. ಆದರೆ ಆಡಂ ಝಂಪಾ (ಅಜೇಯ 13) ಮತ್ತು ಕೆಮರೂನ್ ಗ್ರೀನ್ (ಅಜೇಯ 89) ರನ್ ಸಿಡಿಸಿ ಆಸ್ಟ್ರೇಲಿಯಾಕ್ಕೆ ಗೆಲುವು ತಂದುಕೊಟ್ಟರು. ಆಸೀಸ್ 45 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 233 ರನ್ ಗಳಿಸಿ ವಿಜಯೋತ್ಸವ ಆಚರಿಸಿಕೊಂಡಿತ್ತು. ನ್ಯೂಜಿಲೆಂಡ್ ಪರ ಬೋಲ್ಟ್ 4, ಬ್ರೇಸ್ವೆಲ್ ಮತ್ತು ಹೆನ್ರಿ ತಲಾ 2 ವಿಕೆಟ್ ಹಾರಿಸಿದರು.