ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸಿಡಿಸಿದ ಅರ್ಧ ಶತಕದ ನೆರವಿನಿಂದ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಸೂಪರ್ ಫೋರ್ ಹಂತದ ಎರಡನೇ ಪಂದ್ಯದಲ್ಲಿ ಭಾರತ 182 ರನ್ ಜಯದ ಗುರಿಯನ್ನು ನೀಡಿದೆ.
ಮೊದಲು ಬ್ಯಾಟಿಂಗ್‌ಗೆ ಕಳುಹಿಸಲ್ಪಟ್ಟ ಭಾರತ, ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 181 ರನ್ ಸೇರಿಸಿತು.
ಭಾರತದ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಜೋಡಿ ಆತ್ಮವಿಶ್ವಾಸದಿಂದಲೇ ಆಟವಾಡುತ್ತ ತಂಡದ ಮೊತ್ತವನ್ನು ಹೆಚ್ಚಿಸುತ್ತ ನಡೆದರು. ಮೊದಲ ವಿಕೆಟ್ ಜೊತೆಯಾಟದಲ್ಲಿ ಶರ್ಮಾ ಹಾಗೂ ರಾಹುಲ್ ಜೋಡಿ 5.1 ಓವರ್ ಗಳಲ್ಲಿ 54 ರನ್ ಸೇರಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು.
ರೋಹಿತ್ ಶರ್ಮಾ, ಹ್ಯಾರಿಸ್ ರೌಫ್ ಬೌಲಿಂಗ್‌ನಲ್ಲಿ ಖುಶ್ದಿಲ್ ಶಾಗೆ ಕ್ಯಾಚ್ ನೀಡಿ ಹೊರಬಿದ್ದರು. ಔಟ್ ಆಗುವ ಮುನ್ನ ರೋಹಿತ್ 16 ಎಸೆತಗಳಲ್ಲಿ 28 ರನ್ ಸೇರಿಸಿದರು. ಕೆ.ಎಲ್ ರಾಹುಲ್ 28 ರನ್ ಬಾರಿಸಿ ಪೆವಿಲಿಯನ್ ಸೇರಿದರು.
ವಿರಾಟ್ ಕೊಹ್ಲಿ ಅವರನ್ನು ಸೇರಿಕೊಂಡ ಸೂರ್ಯಕುಮಾರ್ ಯಾದವ್, ಕೇವಲ 13 ರನ್ ಮಾಡಿ ಮೊಹಮ್ಮದ್ ನವಾಜ್ ಬೌಲಿಂಗ್‌ನಲ್ಲಿ ಅಸಿಫ್ ಅಲಿಗೆ ಕ್ಯಾಚ್ ನೀಡಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ವಿರಾಟ್ ಕೊಹ್ಲಿ ಹಾಗೂ ರಿಷಬ್ ಪಂತ್ ಜೋಡಿ 4.1 ಓವರ್‌ಗಳಲ್ಲಿ 35 ರನ್ ಸೇರಿಸಿದರು.
ರಿಷಬ್ ಪಂತ್ (14), ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಹಾರ್ದಿಕ್ ಪಾಂಡ್ಯ ಖಾತೆ ತೆರೆಯುವ ಮುನ್ನವೇ ಮೊಹಮ್ಮದ್ ಹಸ್ನೇನ್ ಬೌಲಿಂಗ್‌ನಲ್ಲಿ ನವಾಜ್‌ಗೆ ಕ್ಯಾಚ್ ನೀಡಿ ಹೊರನಡೆದರು.
ವಿರಾಟ್ ಕೊಹ್ಲಿ ಅವರನ್ನು ಸೇರಿಕೊಂಡ ದೀಪಕ್ ಹೂಡಾ ಜೋಡಿ 4 ಓವರ್‌ಗಳಲ್ಲಿ 37 ರನ್ ಸೇರಿಸಿ ತಂಡದ ಮೊತ್ತವನ್ನು 18.4 ಓವರ್‌ಗಳಲ್ಲಿ 168 ರನ್‌ಗೆ ಮುಟ್ಟಿಸಿದರು. ದೀಪಕ್ ಹೂಡಾ (16) ರನ್ ಗಳಿಸಿ ಪೇವಿಲಿಯನ್ ಸೇರಿದರು. ಉತ್ತಮವಾಗಿ ಆಡುತ್ತಿದ್ದ ವಿರಾಟ್ ಕೊಹ್ಲಿ ರನೌಟ್ ಆಗುವ ಮುನ್ನ ಮಿಂಚಿನ 60 ರನ್ ಬಾರಿಸಿದರು. ಇವರ ಮನಮೋಹಕ ಇನ್ನಿಂಗ್ಸ್ ನಲ್ಲಿ 4 ಬೌಂಡರಿ, 1 ಸಿಕ್ಸರ್ ರನ್ ಸಿಡಿಸಿದರು.
ಅಂತಿಮವಾಗಿ ಭಾರತ 20 ಓವರ್‌ಗಳ ಅಂತ್ಯದಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಮಾಡಿತ್ತು. ಖಾತೆ ತೆರೆಯದ ಭುವನೇಶ್ವರ್ ಕುಮಾರ್ ಹಾಗೂ ರವಿ ಬಿಷ್ಣೋಯ್ (8, 2 ಎಸೆತ, 2 ಬೌಂಡರಿ) ರನ್ ಮಾಡಿ ಅಜೇಯರಾಗಿ ಉಳಿದರು.
ಪಾಕಿಸ್ತಾನ ಪರ ಶಾದಾಬ್ ಖಾನ್ 31 ಕ್ಕೆ ಎರಡು, ಮೊಹಮ್ಮದ್ ನವಾಜ್ 25 ಕ್ಕೆ ಒಂದು ವಿಕೆಟ್ ಉರುಳಿಸಿದರು.
Asia Cup, Virat Kohli, Team India, Pakistan