ಎಂಟು ವರ್ಷಗಳ ಬಳಿಕ ಭಾರತ ವಿರುದ್ಧ ಏಷ್ಯಾ ಕಪ್ ನಲ್ಲಿ ಗೆದ್ದ ಪಾಕ್
ದುಬೈ: ಭರವಸೆಯ ಆಟಗಾರ ಮೊಹಮ್ಮದ್ ರಿಜ್ವಾನ್ ಹಾಗೂ ಮೊಹಮ್ಮದ್ ನವಾಜ್ ಅವರ ಉತ್ತಮ ಆಟದ ನೆರವಿನಿಂದ ಪಾಕಿಸ್ತಾನ ಆರು ವಿಕೆಟ್ ಗಳಿಂದ ಏಷ್ಯಾಕಪ್ ಟಿ-20 ಕ್ರಿಕೆಟ್ ಟೂರ್ನಿಯ ಸೂಪರ್-4 ಪಂದ್ಯದಲ್ಲಿ ರೋಹಿತ್ ಪಡೆಯನ್ನು ಸೋಲಿಸಿದೆ. ಪಾಕ್ ಎಂಟು ವರ್ಷಗಳ ಬಳಿಕ ಏಷ್ಯಾಕಪ್ ನಲ್ಲಿ ಭಾರತವನ್ನು ಮಣಿಸಿದೆ.
ಮೊದಲು ಬ್ಯಾಟಿಂಗ್ಗೆ ಕಳುಹಿಸಲ್ಪಟ್ಟ ಭಾರತ, ನಿಗದಿತ 20 ಓವರ್ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 181 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ 19.5 ಓವರ್ ಗಳಲ್ಲಿ 5 ವಿಕೆಟ್ ಗೆ 182 ರನ್ ಸೇರಿಸಿ ಜಯ ಸಾಧಿಸಿತು.
ಏಷ್ಯಾಕಪ್ ನಲ್ಲಿ 8 ವರ್ಷಗಳ ಬಳಿಕ ಪಾಕಿಸ್ತಾನ ತಂಡ ಭಾರತವನ್ನು ಸೋಲಿಸಿತು. ಇದಕ್ಕೂ ಮುನ್ನ 2014ರಲ್ಲಿ ಏಷ್ಯಾಕಪ್ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದಿತ್ತು. ಸತತ ಐದು ಸೋಲಿನ ಬಳಿಕ ಇದೀಗ ಪಾಕಿಸ್ತಾನಕ್ಕೆ ಗೆಲುವು ದಕ್ಕಿದೆ.
ಭಾರತದ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಜೋಡಿ ಆತ್ಮವಿಶ್ವಾಸದಿಂದಲೇ ಆಟವಾಡುತ್ತ ತಂಡದ ಮೊತ್ತವನ್ನು ಹೆಚ್ಚಿಸುತ್ತ ನಡೆದರು. ಮೊದಲ ವಿಕೆಟ್ ಜೊತೆಯಾಟದಲ್ಲಿ ಶರ್ಮಾ ಹಾಗೂ ರಾಹುಲ್ ಜೋಡಿ 5.1 ಓವರ್ ಗಳಲ್ಲಿ 54 ರನ್ ಸೇರಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು.
ರೋಹಿತ್ ಶರ್ಮಾ, ಹ್ಯಾರಿಸ್ ರೌಫ್ ಬೌಲಿಂಗ್ನಲ್ಲಿ ಖುಶ್ದಿಲ್ ಶಾಗೆ ಕ್ಯಾಚ್ ನೀಡಿ ಹೊರಬಿದ್ದರು. ಔಟ್ ಆಗುವ ಮುನ್ನ ರೋಹಿತ್ 16 ಎಸೆತಗಳಲ್ಲಿ 28 ರನ್ ಸೇರಿಸಿದರು. ಕೆ.ಎಲ್ ರಾಹುಲ್ 28 ರನ್ ಬಾರಿಸಿ ಪೆವಿಲಿಯನ್ ಸೇರಿದರು.
ವಿರಾಟ್ ಕೊಹ್ಲಿ ಅವರನ್ನು ಸೇರಿಕೊಂಡ ಸೂರ್ಯಕುಮಾರ್ ಯಾದವ್, ಕೇವಲ 13 ರನ್ ಮಾಡಿ ಮೊಹಮ್ಮದ್ ನವಾಜ್ ಬೌಲಿಂಗ್ನಲ್ಲಿ ಅಸಿಫ್ ಅಲಿಗೆ ಕ್ಯಾಚ್ ನೀಡಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ವಿರಾಟ್ ಕೊಹ್ಲಿ ಹಾಗೂ ರಿಷಬ್ ಪಂತ್ ಜೋಡಿ 4.1 ಓವರ್ಗಳಲ್ಲಿ 35 ರನ್ ಸೇರಿಸಿದರು.
ರಿಷಬ್ ಪಂತ್ (14), ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಹಾರ್ದಿಕ್ ಪಾಂಡ್ಯ ಖಾತೆ ತೆರೆಯುವ ಮುನ್ನವೇ ಮೊಹಮ್ಮದ್ ಹಸ್ನೇನ್ ಬೌಲಿಂಗ್ನಲ್ಲಿ ನವಾಜ್ಗೆ ಕ್ಯಾಚ್ ನೀಡಿ ಹೊರನಡೆದರು.
ವಿರಾಟ್ ಕೊಹ್ಲಿ ಅವರನ್ನು ಸೇರಿಕೊಂಡ ದೀಪಕ್ ಹೂಡಾ ಜೋಡಿ 4 ಓವರ್ಗಳಲ್ಲಿ 37 ರನ್ ಸೇರಿಸಿ ತಂಡದ ಮೊತ್ತವನ್ನು 18.4 ಓವರ್ಗಳಲ್ಲಿ 168 ರನ್ಗೆ ಮುಟ್ಟಿಸಿದರು. ದೀಪಕ್ ಹೂಡಾ (16) ರನ್ ಗಳಿಸಿ ಪೇವಿಲಿಯನ್ ಸೇರಿದರು. ಉತ್ತಮವಾಗಿ ಆಡುತ್ತಿದ್ದ ವಿರಾಟ್ ಕೊಹ್ಲಿ ರನೌಟ್ ಆಗುವ ಮುನ್ನ ಮಿಂಚಿನ 60 ರನ್ ಬಾರಿಸಿದರು. ಇವರ ಮನಮೋಹಕ ಇನ್ನಿಂಗ್ಸ್ ನಲ್ಲಿ 4 ಬೌಂಡರಿ, 1 ಸಿಕ್ಸರ್ ರನ್ ಸಿಡಿಸಿದರು.
ಪಾಕಿಸ್ತಾನ ಪರ ಶಾದಾಬ್ ಖಾನ್ 31 ಕ್ಕೆ ಎರಡು, ಮೊಹಮ್ಮದ್ ನವಾಜ್ 25 ಕ್ಕೆ ಒಂದು ವಿಕೆಟ್ ಉರುಳಿಸಿದರು.
ಗುರಿಯನ್ನು ಹಿಂಬಾಲಿಸಿದ ಪಾಕ್ ತಂಡದ ಆರಂಭ ಸಾಧಾರಣವಾಗಿತ್ತು. ಬಾಬರ್ ಅಜಮ್ 14 ರನ್ ಬಾರಿಸಿ ಔಟ್ ಆದರು. ಫಖಾರ್ ಜಮನ್ 15 ರನ್ ಸಿಡಿಸಿದರು.
ಮೂರನೇ ವಿಕೆಟ್ ಗೆ ಮೊಹಮ್ಮದ್ ನವಾಜ್ ಹಾಗೂ ಮೊಹಮ್ಮದ್ ರಿಜ್ವಾನ್ ಸೊಗಸಾದ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕಲು ಟೀಮ್ ಇಂಡಿಯಾ ಮಾಡಿಕೊಂಡ ಪ್ಲಾನ್ ಎಲ್ಲ ಉಲ್ಟಾ ಆಯಿತು. ಅಲ್ಲದೆ ಪಾಕ್ ಪರ ಅಗತ್ಯ ರನ್ ಗಳನ್ನು ಕಲೆ ಹಾಕುತ್ತಾ ಸಾಗಿತು. ಅಲ್ಲದೆ ಟೀಮ್ ಇಂಡಿಯಾದ ಮೇಲೆ ಒತ್ತಡ ಹೇರುತ್ತಾ ಸಾಗಿದರು. ಈ ಜೋಡಿ 73 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ನವಾಜ್ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 42 ರನ್ ಬಾರಿಸಿದರು.
ಆರಂಭಿಕ ಮೊಹಮ್ಮದ್ ರಿಜ್ವಾನ್ 51 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ನೆರವಿನಿಂದ 71 ರನ್ ಸಿಡಿಸಿದರು. ಖುಶ್ದಿಲ್ ಶಾ (14), ಆಸಿಫ್ ಅಲಿ (16) ಅಗತ್ಯ ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು.
Asia Cup, Pakistan, won, Team India