ಏಷ್ಯಾ ಕಪ್(ASIA CUP) ಆಯೋಜನೆಯ ನಿರ್ಧಾರದಿಂದ ಶ್ರೀಲಂಕಾ(Sri Lanka) ಹಿಂದೆ ಸರಿದ ಹಿನ್ನೆಲೆಯಲ್ಲಿ ಏಷ್ಯಾ ಕಪ್ ಟಿ20 ಪಂದ್ಯಾವಳಿಯನ್ನು ಯುಎಇಯಲ್ಲಿ ನಡೆಸಲಾಗುವುದು ಎಂದು ಭಾರತೀಯ ಕ್ರಿಕೆಟ್ ಮಂಡಳಿ(BCCI) ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly) ತಿಳಿಸಿದ್ದು, ಪಂದ್ಯಾವಳಿಯ ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ನಡೆಯಲಿದೆ.
ಶ್ರೀಲಂಕಾದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಏಷ್ಯಾ ಕಪ್ ಟೂರ್ನಿಯನ್ನು ನಡೆಸಲು ಸಾಧ್ಯವಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್, ಏಷ್ಯನ್ ಕ್ರಿಕೆಟ್ ಮಂಡಳಿಗೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಏಷ್ಯಾ ಕಪ್ ಟಿ20 ಟೂರ್ನಿಯನ್ನು ಯುಎಇಯಲ್ಲಿ ನಡೆಸಲು ತೀರ್ಮಾನಿಸಿದ್ದು, ಮಳೆಯಿಲ್ಲದ ಕಾರಣ ಏಷ್ಯಾ ಕಪ್ ಪಂದ್ಯಾವಳಿಯನ್ನು ಯುಎಇನಲ್ಲಿ ನಡೆಸಲಾಗುತ್ತಿದೆ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.
ದ್ವೀಪ ರಾಷ್ಟ್ರದಲ್ಲಿ ನಡೆಯುತ್ತಿರುವ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟಿನ ನಡುವೆಯೂ ಶ್ರೀಲಂಕಾ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ವೈಟ್ ಬಾಲ್ ಟೂರ್ನಿ ಹಾಗೂ ಟೆಸ್ಟ್ ಸರಣಿಯನ್ನ ಆಯೋಜಿಸಿತ್ತು. ಅಲ್ಲದೇ ಪ್ರಸ್ತುತ ಪಾಕಿಸ್ತಾನ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಸಹ ಆಯೋಜಿಸಲಾಗಿದೆ. ಆದರೆ ಬಿಕ್ಕಟ್ಟಿನ ಕಾರಣಕ್ಕೆ ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯವನ್ನ ಕೊಲಂಬೊದಿಂದ ಗಾಲೆಗೆ ಸ್ಥಳಾಂತರಿಸಲಾಯಿತು.
ಶ್ರೀಲಂಕಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ನಡುವೆಯೂ ಭಾರತ ಮಹಿಳಾ ತಂಡ ಶ್ರೀಲಂಕಾದಲ್ಲಿ ವೈಟ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿತ್ತು. ಆದರೆ ಬಿಕ್ಕಟ್ಟಿನ ಕಾರಣದಿಂದಾಗಿ ಲಂಕನ್ ಪ್ರೀಮಿಯರ್ ಲೀಗ್ನ 3ನೇ ಆವೃತ್ತಿಯ ಪಂದ್ಯಾವಳಿಯನ್ನು ಶ್ರೀಲಂಕಾ ಮುಂದೂಡಿದೆ. ಶ್ರೀಲಂಕಾದಲ್ಲಿನ ಬಿಕ್ಕಟ್ಟಿನ ಕಾರಣಕ್ಕೆ ಯುಎಇಗೆ ಸ್ಥಳಾಂತರಗೊಂಡಿರುವ ಏಷ್ಯಾ ಕಪ್ ಟಿ20 ಪಂದ್ಯಾವಳಿಯು ಆಗಸ್ಟ್ 27ರಿಂದ ಸೆಪ್ಟೆಂಬರ್ 11ರವರೆಗೆ ನಡೆಯಲಿದೆ.
ASIA CUP 2022 : ಯುಎಇ ಅಂಗಳದಲ್ಲಿ ಏಷ್ಯಾ ಕಪ್ ಟೂರ್ನಿ