Asia Cup 2022- ಯುಎಇಗೆ ಆಘಾತ.. ಪ್ರಧಾನ ಸುತ್ತಿಗೆ ಹಾಂಕಾಂಗ್ ತಂಡ ಎಂಟ್ರಿ..!

ಹಾಂಕಾಂಗ್ ಕ್ರಿಕೆಟ್ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಪ್ರತಿಷ್ಠಿತ 2022ರ ಏಷ್ಯಾಕಪ್ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಆಡುವ ಅರ್ಹತೆಯನ್ನು ಪಡೆದುಕೊಂಡಿದೆ.
ಅರ್ಹತಾ ಸುತ್ತಿನ ಫೈನಲ್ ಪಂದ್ಯದಲ್ಲಿ ಹಾಂಕಾಂಗ್ ತಂಡ ಎಂಟು ವಿಕೆಟ್ ಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು ಸೋಲಿಸಿತ್ತು. ಈ ಮೂಲಕ ಎ ಬಣದಲ್ಲಿ ಭಾರತ, ಪಾಕಿಸ್ತಾನ ತಂಡಗಳ ಜೊತೆಗೆ ಹಾಂಕಾಂಗ್ ತಂಡ ಕೂಡ ಕಾಣಿಸಿಕೊಳ್ಳಲಿದೆ.
ಯುಎಇ ನೀಡಿದ್ದ 148 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಹಾಂಕಾಂಗ್ ತಂಡ ಸುಲಭವಾಗಿಯೇ ಗೆಲುವಿನ ನಗೆ ಬೀರಿತ್ತು. ಹಾಂಕಾಂಗ್ ತಂಡದ ಪರ ಯಾಸೀಮ್ ಮುರ್ಟಝಾ ಅವರು ಆಕರ್ಷಕ 58 ರನ್ ಸಿಡಿಸಿದ್ರು. 31ರ ಹರೆಯದ ಯಾಸೀಮ್ ಮುರ್ಟಝಾ ಅವರು 43 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಗಳನ್ನು ದಾಖಲಿಸಿದ್ದರು. ಇನ್ನೊಂದೆಡೆ 37ರಹರೆಯದ ಹಾಂಕಾಂಗ್ ಸ್ಪಿನ್ನರ್ ಎಹಾಸನ್ ಖಾನ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಎಹಾಸನ್ ಖಾನ್ ಅವರು 24ಕ್ಕೆ 4 ವಿಕೆಟ್ ಉರುಳಿಸಿದ್ರು.
ಆಗಸ್ಟ್ 27ರಿಂದ ಏಷ್ಯಾಕಪ್ ಟೂರ್ನಿ ಆರಂಭವಾಗಲಿದೆ. ಆಗಸ್ಟ್ 28ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ.
ಒಟ್ಟಿನಲ್ಲಿ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಹಾಂಕಾಂಗ್ ಆರನೇ ತಂಡವಾಗಿ ಆಡಲಿದೆ. ಬಾಂಗ್ಲಾ ದೇಶ, ಶ್ರೀಲಂಕಾ ಮತ್ತು ಅಫಘಾನಿಸ್ತಾನ ತಂಡಗಳು ಬಿ ಬಣದಲ್ಲಿ ಫೈಟ್ ಮಾಡಿದ್ರೆ, ಎ ಬಣದಲ್ಲಿ ಭಾರತ, ಪಾಕಿಸ್ತಾನ ಹಾಗೂ ಹಾಂಕಾಂಗ್ ತಂಡಗಳು ಮುಖಾಮುಖಿಯಾಗಲಿವೆ.