Asia Cup 2022- ಪಾಕ್ ಗೆ ಮತ್ತೊಂದು ಶಾಕ್.. ಮಹಮ್ಮದ್ ವಸೀಮ್ ಗೆ ಗಾಯ ..!
ಏಷ್ಯಾಕಪ್ ಟೂರ್ನಿಯ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೇ ಶುರುವಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಕ್ರಿಕೆಟ್ ಜಗತ್ತು ಕೂಡ ಕಾತರದಿಂದ ಕಾಯುತ್ತಿದೆ.
ಆಗಸ್ಟ್ 28ರಂದು ನಡೆಯಲಿರುವ ಸೂಪರ್ ಸಂಡೆಯ ಸೂಪರ್ ಮ್ಯಾಚ್ ಗೆ ಉಭಯ ತಂಡಗಳು ಕೂಡ ರೆಡಿಯಾಗುತ್ತಿವೆ.
ಇದರ ಬೆನ್ನಲ್ಲೇ ಪಾಕಿಸ್ತಾನ ತಂಡ ಆಘಾತದ ಮೇಲೆ ಅಘಾತ ಅನುಭವಿಸಿದೆ. ಈಗಾಗಲೇ ಪಾಕ್ ತಂಡದ ಟ್ರಂಪ್ ಕಾರ್ಡ್ ಬೌಲರ್ ಶಾಹೀನ್ ಆಫ್ರಿದಿ ಅವರು ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದರು.
ಇದೀಗ ಅಭ್ಯಾಸದ ವೇಳೆ ಪಾಕಿಸ್ತಾನದ ಮತ್ತೊಬ್ಬ ವೇಗಿ ಗಾಯಗೊಂಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಹೌದು, ಪಾಕ್ ನ ಮಾರಕ ವೇಗಿ ಮಹಮ್ಮದ್ ವಸೀಮ್ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಇಂದು ಅಭ್ಯಾಸದಲ್ಲೂ ಕಾಣಿಸಿಕೊಂಡಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಮಹಮ್ಮದ್ ವಸೀಮ್ ಅವರನ್ನು ಎಮ್ ಆರ್ ಐ ಸ್ಕ್ಯಾನ್ ಗೆ ಒಳಪಡಿಸಲಾಗಿದೆ.
21ರ ಹರೆಯದ ಮಹಮ್ಮದ್ ವಸೀಮ್ ಅವರು ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ ಮಹಮ್ಮದ್ ವಸೀಮ್ ಅವರು 11 ಟಿ-20 ಪಂದ್ಯ ಹಾಗೂ ಎಂಟು ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ಎ ಬಣದಲ್ಲಿರುವ ಪಾಕಿಸ್ತಾನ ಮತ್ತು ಭಾರತ ತಂಡಗಳು ಮೊದಲ ಪಂದ್ಯದಲ್ಲೇ ಹೋರಾಟ ನಡೆಸಲಿವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳು ಅಪರೂಪವಾಗಿರುವುದರಿಂದ ಈ ಪಂದ್ಯ ಹೆಚ್ಚು ಮಹತ್ವ ಮತ್ತು ರೋಚಕತೆಯನ್ನು ಪಡೆದುಕೊಂಡಿದೆ.
2021ರ ಐಸಿಸಿ ಟಿ-20 ವಿಶ್ವಕಪ್ ನಲ್ಲಿ ಸೋತಿದ್ದ ಭಾರತ ಈಗ ಪಾಕ್ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಹಾಗೇ ಪಾಕಿಸ್ತಾನ ತಂಡ ಸತತ ಎರಡನೇ ಗೆಲುವು ದಾಖಲಿಸುವ ಹಂಬದಲ್ಲಿದೆ.
ಒಟ್ಟಿನಲ್ಲಿ ಪಾಕಿಸ್ತಾನ ತಂಡಕ್ಕೆ ಇಬ್ಬರು ವೇಗಿಗಳು ಗಾಯಗೊಂಡಿರುವುದು ಚಿಂತೆಗೂ ಕಾರಣವಾಗಿದೆ.