ಬ್ರಿಸ್ಬೇನ್ ಮೈದಾನದಲ್ಲಿ ಮೊದಲೆರಡು ದಿನ ನೀರಸ ಪ್ರದರ್ಶನ ನೀಡಿದ್ದ ಇಂಗ್ಲೆಂಡ್ ಮೂರನೇ ದಿನ ತಿರುಗಿಬಿತ್ತು. ಮೊದಲಿಗೆ ಆಸ್ಟ್ರೇಲಿಯಾ ತಂಡವನ್ನು ಕಟ್ಟಿಹಾಕಿದ ಇಂಗ್ಲೆಂಡ್ ನಂತರ ಬ್ಯಾಟಿಂಗ್ನಲ್ಲಿ ಮಿಂಚಿತು. 3ನೇ ದಿನ ಆಟ ಆರಂಭಿಸಿದ ಆಸ್ಟ್ರೇಲಿಯಾ ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಸ್ಟಾರ್ಕ್ ಮೂಲಕ ರನ್ ಕಲೆಹಾಕಿತು. 35 ರನ್ಗಳಿಸಿದ ಸ್ಟಾರ್ಕ್ ಕ್ರಿಸ್ವೋಕ್ಸ್ ಎಸೆತದಲ್ಲಿ ಔಟಾದರು. ನಾಥನ್ ಲಿಯೊನ್ 15 ರನ್ಗಳಿಸಿ ಔಟಾದರು. ಟ್ರಾವಿಡ್ ಬಿರುಸಿನ ಆಟ ಮುಂದುವರೆಸಿದರು. 148 ಎಸೆತಗಳಲ್ಲಿ 152 ರನ್ಗಳಿಸಿದ ಹೆಡ್ ಮಾರ್ಕ್ ವುಡ್ ಎಸೆತದಲ್ಲಿ ಔಟಾದರು. ಆಸ್ಟ್ರೇಲಿಯಾದ ಇನ್ನಿಂಗ್ಸ್ 425 ರನ್ಗಳಿಗೆ ಅಂತ್ಯಕಂಡಿತು.
278 ರನ್ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ಗೆ ಆಸ್ಟ್ರೇಲಿಯಾ ಆರಂಭದಲ್ಲೇ ಶಾಕ್ ನೀಡಿತು. ರೋರಿ ಬರ್ನ್ಸ್ 13 ರನ್ ಮತ್ತು ಹಸೀಬ್ ಹಮೀದ್ 27 ರನ್ಗಳಿಸಿ ಔಟಾದರು. ಆದರೆ ಡೇವಿಡ್ ಮಲಾನ್ ಮತ್ತು ನಾಯಕ ಜೋ ರೂಟ್ 3ನೇ ವಿಕೆಟ್ಗೆ ಅಜೇಯ 159 ರನ್ಗಳ ಜೊತೆಯಾಟ ಆಡಿದರು. ದಿನದ ಅಂತ್ಯಕ್ಕೆ ಇಂಗ್ಲೆಂಡ್ 2ನೇ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಕಳೆದುಕೊಂಡು 220 ರನ್ಗಳಿಸಿದೆ. ಇಂಗ್ಲೆಂಡ್ ಇನ್ನೂ 58 ರನ್ಗಳ ಹಿನ್ನಡೆಯಲ್ಲೇ ಇದೆ. ಜೋ ರೂಟ್ ಅಜೇಯ 86 ರನ್ಗಳಿಸಿದ್ದರೆ, ಡೇವಿಡ್ ಮಲಾನ್ ಅಜೇಯ 80 ರನ್ಗಳೊಂದಿಗೆ 4ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.