ಸೋಲಿನ ಸುಳಿಯಿಂದ ಹೊರ ಬಂದು, ಸತತ ಎರಡು ಗೆಲುವು ಸಾಧಿಸಿದ ಸಂಭ್ರಮದಲ್ಲಿರುವ ಸನ್ರೈಸರ್ಸ್ ಹೈದ್ರಾಬಾದ್ಗೆ ಆಘಾತ ಎದುರಾಗಿದೆ. ಹೈದ್ರಾಬಾದ್ ತಂಡದ ಪ್ರಮುಖ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಇದೀಗ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.
ಪ್ರಸಕ್ತ ಸೀಸನ್ನಲ್ಲಿ ವಾಷಿಂಗ್ಟನ್ ಸುಂದರ್, ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಉತ್ತಮ ಫಾರ್ಮ್ ಕಂಡುಕೊಂಡಿದ್ದರು. ಆದರೆ ಗುಜರಾತ್ ಟೈಟನ್ಸ್ ನಡುವಿನ ಪಂದ್ಯದ ವೇಳೆ ತಮ್ಮ ಬಲಗೈನ ಹೆಬ್ಬೆರಳು ಹಾಗೂ ತೋರು ಬೆರಳಿನ ನಡುವೆ ಉಂಟಾದ ಗಾಯದಿಂದಾಗಿ ಮೈದಾನದಿಂದ ಹೊರ ನಡೆದರು. ತಮ್ಮ 4 ಓವರ್ಗಳ ಬೌಲಿಂಗ್ ಪೂರ್ಣಗೊಳಿಸದೆ ವಾಷಿಂಗ್ಟನ್, 3 ಓವರ್ನಲ್ಲಿ ವಿಕೆಟ್ ಪಡೆಯದೆ 14 ರನ್ ನೀಡಿದ್ದರು.
ಚೇತರಿಕೆಗೆ 1-2 ವಾರಬೇಕಿದೆ:
ವಾಷಿಂಗ್ಟನ್ ಸುಂದರ್ ಅವರ ಬಲಗೈ ಗಾಯವಾಗಿದ್ದು, ಮುಂದಿನ 2-3 ದಿನಗಳು ಇದರ ಬಗ್ಗೆ ನಿಗಾವಹಿಸಲಿದ್ದೇವೆ. ಇದು ಗಂಭೀರವಾದ ಸಮಸ್ಯೆ ಅಲ್ಲದಿದ್ದರೂ, ಚೇತರಿಸಿಕೊಳ್ಳಲು ಕನಿಷ್ಠ ಒಂದು ವಾರ ಅಥವಾ ಅದಕ್ಕಿಂತ ಹೆಚ್ಚಿನ ಸಮಸ್ಯೆ ತೆಗೆದುಕೊಳ್ಳಲಿದೆ ಎಂದು ಸನ್ರೈಸರ್ಸ್ ಹೈದ್ರಾಬಾದ್ ತಂಡದ ಮುಖ್ಯ ಕೋಚ್ ಟಾಮ್ ಮೂಡಿ ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸನ್ರೈಸರ್ಸ್ಗೆ ತಲೆನೋವು:
ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವಾಷಿಂಗ್ಟನ್ ಸುಂದರ್ ಮುಂದಿನ ಕೆಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲೂ ತಂಡಕ್ಕೆ ನೆರವಾಗುತ್ತಿದ್ದ ವಾಷಿಂಗ್ಟನ್ ಸುಂದರ್ ಇಲ್ಲದಿರುವುದು ತಂಡದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಯುವ ಆಲ್ರೌಂಡರ್ ಅನುಪಸ್ಥಿತಿಯಲ್ಲಿ ಮುಂದಿನ ಪಂದ್ಯಗಳಿಗೆ ಕನ್ನಡಿಗರಾದ ಶ್ರೇಯಸ್ ಗೋಪಾಲ್ ಹಾಗೂ ಜೆ. ಸುಚಿತ್ ಅವರಲ್ಲಿ ಯಾರನ್ನ ಕಣಕ್ಕಿಳಿಸುವುದು ಎಂಬ ಆಲೋಚನೆ ಹೆಚ್ಚಿಸಿದೆ.
ಪ್ರಸಕ್ತ ಐಪಿಎಲ್ನಲ್ಲಿ ವಾಷಿಂಗ್ಟನ್ ಸುಂದರ್, ಆಡಿರುವ 4 ಪಂದ್ಯಗಳಲ್ಲಿ 58 ರನ್ಗಳಿಸಿದ್ದು, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 14 ಬಾಲ್ಗಳಲ್ಲಿ 40 ರನ್ಗಳಿಸಿ ಮಿಂಚಿದ್ದರು. ಇನ್ನೂ ಬೌಲಿಂಗ್ನಲ್ಲಿ 27.50ರ ಸರಾಸರಿಯೊಂದಿಗೆ 4 ವಿಕೆಟ್ ಪಡೆದಿದ್ದಾರೆ.