T20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾಕ್ಕೆ ನ್ಯೂಜಿಲೆಂಡ್ ಟೆಸ್ಟ್, ದುಬೈನಲ್ಲಿ ಎರಡೂ ತಂಡಗಳಿಗೆ ಗೆಲುವೊಂದೇ ಮಂತ್ರ..!
ಐಸಿಸಿ ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿ ಗೆಲ್ಲುವ ಫೆವರೀಟ್ ತಂಡಗಳು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಈ ಮೂರು ವಿಭಾಗಗಳಲ್ಲಿ ಈ ಎರಡೂ ತಂಡಗಳು ಬಲಿಷ್ಠ. ಆದರೆ ಪಾಕಿಸ್ತಾನದ ವಿರುದ್ಧ ಎರಡೂ ತಂಡಗಳು ಮುಗ್ಗರಿಸಿವೆ. ಟೂರ್ನಿಯಲ್ಲಿ ಈ ಎರಡು ತಂಡಗಳು ಈಗ ಲೀಗ್ ಹಂತದ 2ನೇ ಪಂದ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಎರಡೂ ತಂಡಗಳಿಗೂ ಗೆಲುವೊಂದೇ ಮಂತ್ರವಾಗಿದೆ. ಈ ಪಂದ್ಯವನ್ನು ಸೋತ ತಂಡ ಟೂರ್ನಿಗೆ ಬಹುತೇಕವಾಗಿ ಗುಡ್ ಬೈ ಹೇಳಬೇಕಾಗುತ್ತದೆ.
ದುಬೈ ಅಂತರಾಷ್ಟ್ರೀಯ ಮೈದಾನದಲ್ಲ ಕಣಕ್ಕಿಳಿಯುವ ಮುನ್ನ ಸಣ್ಣಪುಟ್ಟ ಬದಲಾವಣೆ ಎರಡೂ ತಂಡದಲ್ಲಿ ಗ್ಯಾರೆಂಟಿ ಆಗಿದೆ. ಟೀಮ್ ಇಂಡಿಯಾ ನ್ಯೂಜಿಲೆಂಡ್ಗಿಂತ ಕೊಂಚ ಹೆಚ್ಚೇ ಯೋಚನೆ ಮಾಡುತ್ತಿದೆ. ರೋಹಿತ್, ರಾಹುಲ್ ಓಪನಿಂಗ್ ಮಾಡೋದು ಗ್ಯಾರೆಂಟಿ. ಕ್ಯಾಪ್ಟನ್ ವಿರಾಟ್ ಕೊಹ್ಲಿ ಬಗ್ಗೆ ಮಾತಿಲ್ಲ.ಸ ಆದರೆ ಸೂರ್ಯಕುಮಾರ್ ಯಾದವ್ ಸ್ಥಾನದಲ್ಲಿ ಇಶಾನ್ ಕಿಶನ್ ಆಡಿದರೂ ಅಚ್ಚರಿ ಇಲ್ಲ. ಒಂದು ವೇಳೆ ಇಶನ್ ಕಿಶನ್ ಆಡಿದರೆ ರಾಹುಲ್ ಬದಲು ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯೂ ಇಲ್ಲದ್ದಿಲ್ಲ. ಆಗ ರಾಹುಲ್ ಫಿನಿಷರ್ ಕಾರ್ಯವನ್ನು ಮಾಡಬೇಕಾಗುತ್ತದೆ. ರಿಷಭ್ ಪಂತ್ ವಿಕೆಟ್ ಕೀಪಿಂಗ್ ಜೊತೆ ಬ್ಯಾಟಿಂಗ್ನಲ್ಲೂ ಮಿಂಚಬೇಕು. ಹಾರ್ದಿಕ್ ಪಾಂಡ್ಯಾ ನೆಟ್ಸ್ನಲ್ಲಿ ಬೌಲಿಂಗ್ ಮಾಡಿದ್ದು ತಂಡದ ವಿಶ್ವಾಸ ಹೆಚ್ಚಿಸಿದೆ. ಇನ್ನು ಮೊಹಮ್ಮದ್ ಶಮಿ ಮತ್ತು ಬುಮ್ರಾ ಆಡೋದು ಗ್ಯಾರೆಂಟಿ. ಆದರೆ ಭುವನೇಶ್ವರ್ ಜಾಗದಲ್ಲಿ ಶಾರ್ದೂಲ್ ಠಾಕೂರ್ ಅವಕಾಶ ಪಡೆಯಬಹುದು. ಅಶ್ವಿನ್ ಮತ್ತು ವರುಣ್ ಚಕ್ರವರ್ತಿ ನಡುವೆ ಆಯ್ಕೆಯಂತೂ ಇದ್ದೇ ಇದೆ.
ನ್ಯೂಜಿಲೆಂಡ್ ತಂಡದಲ್ಲೂ ಕೆಲ ಸಮಸ್ಯೆಗಳಿವೆ. ಮಾರ್ಟಿನ್ ಗಪ್ಟಿಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ಡೆರಿಲ್ ಮಿಚೆಲ್ ಫಿನಿಷರ್ ಕಾರ್ಯ ಮಾಡಬೇಕಾಗಬಹುದು. ಗ್ಲೆನ್ ಫಿಲಿಫ್ಸ್ ಇಲ್ಲವೆ ಡೆವೊನ್ ಕಾನ್ವೆ ಇನ್ನಿಂಗ್ಸ್ ಆರಂಭಿಸುವ ಕಾರ್ಯತಂತ್ರವನ್ನು ಕಿವೀಸ್ ಮಾಡುತ್ತಿದೆ. ಕೇನ್ ವಿಲಿಯಮ್ಸನ್ ತಂಡದ ಬ್ಯಾಟಿಂಗ್ ಶಕ್ತಿ. ಉಳಿದವರು ಅವರ ಸುತ್ತ ಆಡಿದರೆ ಕೆಲಸ ಸುಲಭವಾಗಿ ಬಿಡುತ್ತದೆ. ಬೌಲಿಂಗ್ನಲ್ಲಿ ಟಿಮ್ ಸೌಥಿ ಮತ್ತು ಟ್ರೆಂಟ್ ಬೋಲ್ಟ್ ಟ್ರಂಪ್ ಕಾರ್ಡ್ಗಳು. ಈಶ್ ಸೋಧಿ ಮತ್ತು ಮಿಚೆಲ್ ಸ್ಯಾಂಟ್ನರ್ ಸ್ಪಿನ್ ಸ್ಪೆಷಲಿಸ್ಟ್ಗಳು. ಜೇಮ್ಸ್ ನಿಶಾಮ್ ಮತ್ತು ಡೆರಿಲ್ ಮಿಚೆಲ್ ಜೊತೆಯಾಗಿ 5ನೇ ಬೌಲರ್ ಸ್ಥಾನ ತುಂಬಬೇಕಾಗುತ್ತದೆ.
ದುಬೈನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಡ್ಯೂ ಫ್ಯಾಕ್ಟರ್ ಬಗ್ಗೆ ಗಮನ ಕೊಡಬೇಕಿದೆ. ಹೀಗಾಗಿಸ ಟಾಸ್ ಗೆದ್ದವರು ಹೆಚ್ಚು ಕಡಿಮೆ ಬಾಸ್ ಆದಂತೆಯೇ. ಒಟ್ಟಿನಲ್ಲಿ ಎರಡೂ ತಂಡಕ್ಕೂ ಗೆಲುವು ಅನಿವಾರ್ಯ ಆಗಿರುವುದರಿಂದ ಇದು ಹೈ ವೋಲ್ಟೇಜ್ ಮ್ಯಾಚ್ ಆಗಿ ಬದಲಾಗಿದೆ.