ಎಂಎಸ್ ಧೋನಿ(32*) ಹಾಗೂ ರವೀಂದ್ರ ಜಡೇಜಾ(25*) ಛಲಬಿಡದ ಹೋರಾಟದ ನಡುವೆಯೂ ಸಂದೀಪ್ ಶರ್ಮ ಅವರ ಚಾಣಾಕ್ಷ ಬೌಲಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 3 ರನ್ಗಳ ರೋಚಕ ಗೆಲುವು ಸಾಧಿಸಿತು.
ಚೆನ್ನೈನ ಚೆಪಾಕ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್ಕೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 8 ವಿಕೆಟ್ಗೆ 175 ರನ್ಗಳಿಸಿತು. ಈ ಟಾರ್ಗೆಟ್ ಚೇಸ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 6 ವಿಕೆಟ್ಗೆ 172 ರನ್ಗಳಿಗೆ ತನ್ನ ಹೋರಾಟ ಮುಗಿಸಿತು. ಈ ಗೆಲುವಿನೊಂದಿಗೆ ರಾಜಸ್ಥಾನ್ ಟೂರ್ನಿಯಲ್ಲಿ 3ನೇ ಗೆಲುವು ಸಾಧಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದರೆ. ಚೆನ್ನೈ ಸೂಪರ್ ಕಿಂಗ್ಸ್ ಮನೆಯಂಗಳದಲ್ಲಿ ಸೋಲಿನ ಆಘಾತ ಅನುಭವಿಸಿತು.
ಧೋನಿ-ಜಡೇಜಾ ವ್ಯರ್ಥ ಆಟ:
ರಾಜಸ್ಥಾನ್ ನೀಡಿದ 176 ರನ್ಗಳ ಟಾರ್ಗೆಟ್ ಚೇಸ್ ಮಾಡಿದ ಸಿಎಸ್ಕೆ ಆರಂಭದಲ್ಲೇ ಋತುರಾಜ್ ಗಾಯಕ್ವಾಡ್(8) ವಿಕೆಟ್ ಕಳೆದುಕೊಂಡಿತು. ನಂತರ 2ನೇ ವಿಕೆಟ್ಗೆ ಜೊತೆಯಾದ ಡೆವೂನ್ ಕಾನ್ವೆ(50) ಹಾಗೂ ಅಜಿಂಕ್ಯಾ ರಹಾನೆ(31) 68 ರನ್ಗಳ ಜೊತೆಯಾಟದಿಂದ ಚೇತರಿಕೆ ನೀಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಂದ ಶಿವಂ ದುಬೆ(8), ಮೊಯಿನ್ ಅಲಿ(7) ಹಾಗೂ ಅಂಬಟಿ ರಾಯುಡು(1) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಈ ಹಂತದಲ್ಲಿ ಜೊತೆಯಾದ ರವೀಂದ್ರ ಜಡೇಜಾ(25*) ಹಾಗೂ ನಾಯಕ ಎಂಎಸ್ ಧೋನಿ(32*) ಗೆಲುವಿಗಾಗಿ ಕೊನೆಯವರೆಗೂ ಹೋರಾಟ ನಡೆಸಿದರು ಗೆಲುವು ಸಿಗಲಿಲ್ಲ. ರಾಜಸ್ಥಾನ್ ಪರ ಅಶ್ವಿನ್ ಹಾಗೂ ಚಹಲ್ ತಲಾ 2 ವಿಕೆಟ್ ಪಡೆದರೆ. ಸಂದೀಪ್ ಶರ್ಮ ಮತ್ತು ಜ್ಹಂಪ ತಲಾ 1 ವಿಕೆಟ್ ಪಡೆದರು.
ಬಟ್ಲರ್ ಅರ್ಧಶತಕ:
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಆರಂಭದಲ್ಲೇ ಯಶಸ್ವಿ ಜೈಸ್ವಾಲ್(10) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ನಂತರದಲ್ಲಿ ಜೊತೆಯಾದ ಜಾಸ್ ಬಟ್ಲರ್(52) ಹಾಗೂ ದೇವದತ್ ಪಡಿಕ್ಕಲ್(38) 2ನೇ ವಿಕೆಟ್ಗೆ 77 ರನ್ಗಳ ಉತ್ತಮ ಜೊತೆಯಾಟದಿಂದ ತಂಡಕ್ಕೆ ಚೇತರಿಕೆ ನೀಡಿದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಬಟ್ಲರ್(52 ರನ್, 36 ಬಾಲ್, 1 ಬೌಂಡರಿ, 3 ಸಿಕ್ಸ್) ಆಕರ್ಷಕ ಅರ್ಧಶತಕ ದಾಖಲಿಸಿದರು. ನಂತರ ಬಂದ ನಾಯಕ ಸಂಜೂ ಸ್ಯಾಮ್ಸನ್(0) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಈ ಹಂತದಲ್ಲಿ ಜೊತೆಯಾದ ರವಿಚಂದ್ರನ್ ಅಶ್ವಿನ್(30) ಹಾಗೂ ಶಿಮ್ರಾನ್ ಹೆಟ್ಮಾಯೇರ್(30) ಉಪಯುಕ್ತ ರನ್ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಆದರೆ ಬಳಿಕ ಬಂದ ಯಾರೊಬ್ಬರು ಸಹ ತಂಡಕ್ಕೆ ಆಸರೆಯಾಗಲಿಲ್ಲ. ಪರಿಣಾಮ ರಾಜಸ್ಥಾನ್ 20 ಓವರ್ಗಳಲ್ಲಿ 8 ವಿಕೆಟ್ಗೆ 175 ರನ್ಗಳಿಸಿತು. ಚೆನ್ನೈ ಪರ ಆಕಾಶ್ ಸಿಂಗ್, ತುಷಾರ್ ದೇಶಪಾಂಡೆ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು.
IPL 2023, Chennai Super Kings, Rajasthan Royals, MS Dhoni, Sanju Samson,