Umesh Yadav – Middlesex – ಉಮೇಶ್ ಯಾದವ್ ಜೊತೆಗಿನ ಒಪ್ಪಂದಕ್ಕೆ ಬ್ರೇಕ್ ಹಾಕಿದ ಕೌಂಟಿ ಕ್ಲಬ್..!
ಟೀಮ್ ಇಂಡಿಯಾದ ವೇಗಿ ಉಮೇಶ್ ಯಾದವ್ ಗಾಯಗೊಂಡಿದ್ದಾರೆ. ಇಂಗ್ಲೀಷ್ ಕೌಂಟಿ ಪಂದ್ಯದ ವೇಳೆ ಗಾಯಗೊಂಡಿರುವ ಉಮೇಶ್ ಯಾದವ್ ಅವರು ಈಗ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
34ರ ಹರೆಯದ ಉಮೇಶ್ ಯಾದವ್ ಅವರ ಮೇಲೆ ಬಿಸಿಸಿಐ ಮೆಡಿಕಲ್ ಟೀಮ್ ನಿಗಾ ವಹಿಸಿದೆ. ಉಮೇಶ್ ಯಾದವ್ ತೊಡೆ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಇದೀಗ ಗಾಯದಿಂದ ನಿಧಾನವಾಗಿ ಚೇತರಿಸಿಕೊಂಡಿದ್ದು, ಲಘುವಾಗಿ ಬೌಲಿಂಗ್ ಅಭ್ಯಾಸವನ್ನು ನಡೆಸುತ್ತಿದ್ದಾರೆ.
ಅಂದ ಹಾಗೇ ಉಮೇಶ್ ಯಾದವ್ ಅವರು ಇಂಗ್ಲೆಂಡ್ ನ ಮಿಡ್ಲೆಸೆಕ್ಸ್ ಕೌಂಟಿ ತಂಡದ ಪರ ಆಡುತ್ತಿದ್ದರು. ರಾಯಲ್ ಲಂಡನ್ ವನ್ ಡೇ ಕಪ್ ಟೂರ್ನಿಯ ವೇಳೆ ಉಮೇಶ್ ಯಾದವ್ ಗಾಯಗೊಂಡಿದ್ದರು. ಗ್ಲೌಸ್ಸ್ಟೆಶೈರ್ ತಂಡದ ವಿರುದ್ಧ ಆಡುವಾಗ ಉಮೇಶ್ ಯಾದವ್ ಅವರಿಗೆ ತೊಡೆ ಸ್ನಾಯು ನೋವು ಕಾಣಿಸಿಕೊಂಡಿತ್ತು. ಆಗಸ್ಟ್ 21ರಿಂದ ಉಮೇಶ್ ಯಾದವ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಮೇಶ್ ಯಾದವ್ ಭಾರತದಿಂದ ಲಂಡನ್ ಗೆ ಹಿಂತಿರುಗುವುದಿಲ್ಲ. ಈ ತಿಂಗಳು ನಡೆಯಲಿರುವ ಎರಡು ಪಂದ್ಯಗಳಲ್ಲಿ ಉಮೇಶ್ ಯಾದವ್ ಆಡುವುದಿಲ್ಲ. ಲೀಸೆಸ್ಟರ್ ಶೈರ್ ಮತ್ತು ವೊರ್ಸೆಸ್ಟೈರ್ ಶೈರ್ ತಂಡಗಳ ವಿರುದ್ದದ ಪಂದ್ಯಗಳಿಗೆ ಉಮೇಶ್ ಯಾದವ್ ಲಭ್ಯರಿರುವುದಿಲ್ಲ. ಅವರು ಮಿಡ್ಲೆಸೆಕ್ಸ್ ತಂಡದ ಭಾಗವಾಗಿರುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮಿಡ್ಲೆಸೆಕ್ಸ್ ತಂಡ ಅಧಿಕೃತವಾಗಿ ತಿಳಿಸಿದೆ.
ಉಮೇಶ್ ಯಾದವ್ ಅವರು 52 ಟೆಸ್ಟ್ ಪಂದ್ಯಗಳಲ್ಲಿ 158 ವಿಕೆಟ್ ಹಾಗೂ 75 ಏಕದಿನ ಪಂದ್ಯಗಳಲ್ಲಿ 106 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಉಮೇಶ್ ಯಾದವ್ ಅವರು ಕಳೆದ ಜುಲೈ ನಲ್ಲಿ ಮಿಡ್ಲೆಸೆಕ್ಸ್ ತಂಡದ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ, ಉಮೇಶ್ ಯಾದವ್ ಅವರು ಸೆಪ್ಟಂಬರ್ 17ರಂದು ಮತ್ತೆ ಲಂಡನ್ ಗೆ ತೆರಳಬೇಕಿತ್ತು.