ಕ್ರಿಕೆಟ್ ಅಭಿಮಾನಿಗಳಿಗೆ ಇಂದು ಭರ್ಜರಿ ರಸದೌತಣ ಸಿಗಲಿದ್ದು, ಐಪಿಎಲ್ನ ಬಲಿಷ್ಠ ತಂಡಗಳಾದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಐಪಿಎಲ್ನ “ಎಲ್ ಕ್ಲಾಸಿಕೋ” ಎಂದೇ ಕರೆಯಲಾಗುವ ಉಭಯ ತಂಡಗಳ ನಡುವಿನ ಹೈವೋಲ್ಟೇಜ್ ಕದನಕ್ಕೆ ಮುಂಬೈನ ವಾಂಖೆಡೆ ಮೈದಾನ ಸಜ್ಜಾಗಿದೆ. ಐಪಿಎಲ್ನಲ್ಲಿ ಹಲವು ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಮುಂಬೈ ಹಾಗೂ ಚೆನ್ನೈ ನಡುವಿನ ಹಣಾಹಣಿ ಎಲ್ಲರ ಗಮನ ಸೆಳೆದಿದ್ದು, ಈ ರೋಚಕ ಹಣಾಹಣಿ ಕಣ್ತುಂಬಿಕೊಳ್ಳಲು ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ.
ಉಭಯ ತಂಡಗಳು ಹಲವು ಬಾರಿ ಪ್ರಶಸ್ತಿ ಗೆಲ್ಲುವ ಮೂಲಕ ತಮ್ಮ ಸಾಮರ್ಥ್ಯ ಏನೆಂಬುದನ್ನ ಸಾಬೀತುಪಡಿಸಿವೆ. ಪ್ರಸಕ್ತ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಸೋಲಿನ ಆರಂಭ ಕಂಡಿದ್ದು, ಆರ್ಸಿಬಿ ವಿರುದ್ಧದ ಮೊದಲ ಪಂದ್ಯದ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಸ್ಟ್ರಾಂಗ್ ಕಮ್ಬ್ಯಾಕ್ ಮಾಡುವ ತವಕದಲ್ಲಿದೆ. ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಸೋತರು ಎರಡನೇ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿರುವ ಚೆನ್ನೈ ತನ್ನ ಗೆಲುವಿನ ಹಾದಿಯಲ್ಲೇ ಮುನ್ನಡೆಯುವ ಲೆಕ್ಕಾಚಾರದೊಂದಿಗೆ ಸಜ್ಜಾಗಿದೆ.
ಎರಡು ತಂಡಗಳು ಐಪಿಎಲ್ನಲ್ಲಿ ಈವರೆಗೂ 36 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 21 ಬಾರಿ ಮುಂಬೈ ಹಾಗೂ 15 ಬಾರಿ ಚೆನ್ನೈ ಗೆಲುವಿನ ನಗೆಬೀರಿದೆ. ಆದರೆ 2022ರ ಐಪಿಎಲ್ ಟೂರ್ನಿಯಲ್ಲಿ ಈ ಎರಡು ತಂಡಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದವು. ಹೀಗಾಗಿ ಈ ಆವೃತ್ತಿಯಲ್ಲಿ ಬಲಿಷ್ಠ ಪ್ರದರ್ಶನ ನೀಡುವ ಮೂಲಕ ಮತ್ತೆ ತಮ್ಮ ಪ್ರಾಬಲ್ಯ ಮುಂದುವರಿಸಲು ಸಜ್ಜಾಗಿವೆ.
ಮುಂಬೈ: ರೋಹಿತ್ ಶರ್ಮ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಕೆಮರೂನ್ ಗ್ರೀನ್, ತಿಲಕ್ ವರ್ಮ, ನಿಹಾಲ್ ವಾಧೇರ, ಟಿಮ್ ಡೇವಿಡ್, ಹೃತಿಕ್ ಶೋಕೆನ್, ಅರ್ಶದ್ ಖಾನ್, ಕುಮಾರ್ ಕಾರ್ತಿಕೇಯನ್, ಜೋಫ್ರಾ ಆರ್ಚರ್.
ಚೆನ್ನೈ: ಡೆವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ಶಿವಂ ದುಬೆ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ, ಮಿಚೆಲ್ ಸ್ಯಾಂಟ್ನರ್, ರಾಜವರ್ಧನ್ ಹಂಗಾರ್ಗೆಕರ್, ದೀಪಕ್ ಚಹರ್.
IPL 2023, Rohit Sharma, Mumbai Indians, MS Dhoni, Chennai Super Kings.