16ನೇ ಆವೃತ್ತಿಯ ಐಪಿಎಲ್ನ ತನ್ನ 2ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮೊದಲ ಗೆಲುವು ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್, ಆ ಮೂಲಕ ತನ್ನ ತವರಿನಂಗಳದಲ್ಲಿ ಗೆಲುವಿನ ಓಟ ಮುಂದುವರಿಸಿದೆ.
ಸಂಘಟಿತ ಪ್ರದರ್ಶನದ ಮೂಲಕ ಸಿಎಸ್ಕೆ 12 ರನ್ಗಳಿಂದ ಗೆದ್ದು ಬೀಗಿದ್ದರೂ, ತಂಡದ ಬೌಲರ್ಗಳ ಪ್ರದರ್ಶನದ ಬಗ್ಗೆ ಕ್ಯಾಪ್ಟನ್ ಕೂಲ್ ಧೋನಿ ಗರಂ ಆಗಿದ್ದಾರೆ. ಪಂದ್ಯದ ಬಳಿಕ ನಡೆದ ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ ವೇಳೆ ಮಾತನಾಡಿದ ಧೋನಿ, ಎಕ್ಸ್ಟ್ರಾಸ್ ಮೂಲಕ ಹೆಚ್ಚಿನ ರನ್ ನೀಡುವುದಕ್ಕೆ ಬ್ರೇಕ್ ಹಾಕುವಂತೆ ವಾರ್ನ್ ಮಾಡಿದ್ದಾರೆ.
“ನಾವುಗಳು ಹೆಚ್ಚು ಎಕ್ಸ್ಟ್ರಾ ಬಾಲ್ಗಳನ್ನು ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ. ಮುಂದಿನ ಪಂದ್ಯಗಳಲ್ಲಿ ನೋ ಬಾಲ್ ಮತ್ತು ವೈಡ್ ಬಾಲ್ಗಳನ್ನ ಮಾಡಬಾರದು. ಒಂದೊಮ್ಮೆ ಆ ರೀತಿ ಮಾಡಿದ್ದೇ ಆದಲ್ಲಿ ಅವರುಗಳು ಹೊಸ ನಾಯಕತ್ವದಲ್ಲಿ ಆಡಬೇಕಾಗುತ್ತದೆʼ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಚೆಪಾಕ್ನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ಗಳು ಹೆಚ್ಚು ಎಕ್ಸ್ಟ್ರಾ ಬಾಲ್ಗಳನ್ನ ಮಾಡಿ ದುಬಾರಿ ರನ್ ಬಿಟ್ಟುಕೊಟ್ಟರು. ಬ್ಯಾಟಿಂಗ್ನಲ್ಲಿ 217 ರನ್ಗಳ ಬೃಹತ್ ಮೊತ್ತ ಕಲೆಹಾಕಿದ ಸಿಎಸ್ಕೆ, 13 ವೈಡ್ ಮತ್ತು 3 ನೋ ಬಾಲ್ ಮಾಡಿದರು. ಇದರ ಪರಿಣಾಮ ಚೇಸಿಂಗ್ನಲ್ಲಿ ಲಕ್ನೋ ತಂಡ 205/7 ರನ್ಗಳಿಸಿತು.
ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಸಿಎಸ್ಕೆ 20 ಓವರ್ಗಳಲ್ಲಿ 7 ವಿಕೆಟ್ಗೆ 217 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ಎಲ್ಎಸ್ಜಿ, 20 ಓವರ್ಗಳಲ್ಲಿ 205/7 ರನ್ಗಳಿಸಿ 12 ರನ್ಗಳ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಧೋನಿ ಪಡೆ 16ನೇ ಆವೃತ್ತಿಯ ಐಪಿಎಲ್ನಲ್ಲಿ ಗೆಲುವಿನ ಖಾತೆ ತೆರೆದರೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಗೆದ್ದಿದ್ದ ಲಕ್ನೋ ಸೋಲಿನ ಆಘಾತ ಕಂಡಿತು.
IPL 2023, Chennai Super Kings, MS Dhoni, Lucknow Super Giants, Sports Karnataka