Cheteshwar Pujara – ಒಂದೇ ಓವರ್ ನಲ್ಲಿ 22 ರನ್. ಶತಕ ದಾಖಲಿಸಿದ್ರೂ ಸಿಗಲಿಲ್ಲ ಗೆಲುವು..!
ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ (Cheteshwar Pujara) ಅವರು ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ನಲ್ಲಿ ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ.
ಈಗಗಲೇ ಕೌಂಟಿ ಕ್ರಿಕೆಟ್ ನಲ್ಲಿ ಭಾರೀ ಸದ್ದು ಮಾಡಿದ್ದ ಚೇತೇಶ್ವರ ಪೂಜಾರ ಅವರು ಇದೀಗ ರಾಯಲ್ ಲಂಡನ್ ಒನ್ ಡೇ ಕಪ್ ಟೂರ್ನಿಯಲ್ಲೂ ಮಿಂಚು ಹರಿಸುತ್ತಿದ್ದಾರೆ.
ಸಸೆಕ್ಸ್ ತಂಡದ ಪರ ಆಡುತ್ತಿರುವ ಚೇತೇಶ್ವರ ಪೂಜಾರ ಅವರು ವಾರ್ವಿಕ್ ಶೈರ್ ತಂಡದ ವಿರುದ್ಧ ಆಕರ್ಷಕ ಶತಕ ದಾಖಲಿಸಿದ್ದರು. ಅಲ್ಲದೇ ಒಂದೇ ಓವರ್ ನಲ್ಲಿ 22 ರನ್ ಕೂಡ ಸಿಡಿಸಿದ್ರು. ಆದ್ರೆ ಕೊನೆಯ ಓವರ್ ನ ಮೊದಲ ಎಸೆತದಲ್ಲಿ ಔಟಾದ ಚೇತೇಶ್ವರ ಪೂಜಾರ ಅವರಿಗೆ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಮೊದಲು ಬ್ಯಾಟಿಂಗ್ ಮಾಡಿದ್ದ ವಾರ್ವಿಕ್ ಶೈರ್ ತಂಡ ನಿಗದಿತ 50 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿತ್ತು.
ವಾರ್ವಿಕ್ ಶೈರ್ ತಂಡದ ಪರ ರಾಬರ್ಟ್ ಯಾಟೆಸ್ 114 ಎಸೆತಗಳಲ್ಲಿ 111 ರನ್ ಗಳಿಸಿದ್ರು. ಹಾಗೇ ವಿಲ್ ರೋಡ್ಸ್ 76 ರನ್, ಮೈಕೆಲ್ ಬ್ಯುರ್ಗೆಸ್ 58 ರನ್ ದಾಖಲಿಸಿದ್ರು.
ಸವಾಲನ್ನು ಬೆನ್ನಟ್ಟಿದ್ದ ಸಸೆಕ್ಸ್ ತಂಡಕ್ಕೆ ಚೇತೇಶ್ವರ ಪೂಜಾರ ಅವರ ಶತಕದ ಆಟ ಗೆಲುವಿನ ಆಸೆಯನ್ನು ಮೂಡಿಸಿತ್ತು. ಅದರಲ್ಲೂ 45ನೇ ಓವರ್ ನಲ್ಲಿ ಲಿಯಾನ್ ನಾರ್ವೆಲ್ ಓವರ್ ನಲ್ಲಿ ಪೂಜಾರ ಅವರು 22 ರನ್ ಕಲೆ ಹಾಕಿದ್ರು. ಆದ್ರೆ 49ನೇ ಓವರ್ ನ ಮೊದಲ ಎಸೆತದಲ್ಲೇ ಪೂಜಾರ ಪೆವಿಲಿಯನ್ ಗೆ ಹಿಂತಿರುಗಿದ್ರು. ಇದಕ್ಕು ಮೊದಲು ಪೂಜಾರ ಅವರು 79 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ 107 ರನ್ ಗಳಿಸಿದ್ದರು.
ವಾರ್ವಿಕ್ ಶೈರ್ ತಂಡದ ಪರ ಕೃನಾಲ್ ಪಾಂಡ್ಯ ಅವರು ಅಮೋಘ ಬೌಲಿಂಗ್ ದಾಳಿ ಸಂಘಟಿಸಿ ಮೂರು ವಿಕೆಟ್ ಉರುಳಿಸಿದ್ರು. ಅಲ್ಲದೆ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.