ಪ್ರವಾಸಿ ಆಸ್ಟ್ರೇಲಿಯಾ ನೀಡಿದ ಬೃಹತ್ ಸವಾಲಿಗೆ ಪಾಕಿಸ್ತಾನ ಬ್ಯಾಟ್ಸಮನ್ಗಳು ದಿಟ್ಟ ಪ್ರತ್ಯುತ್ತರ ನೀಡಿದ್ದು, ಉಭಯ ತಂಡಗಳ ನಡುವಿನ ಮೂರನೇ ಹಾಗೂ ಕೊನೆಯ ಟೆಸ್ಟ್ ಕುತೂಹಲದ ಘಟ್ಟ ತಲುಪಿದೆ.
ಲಾಹೋರ್ನಲ್ಲಿ ನಡೆಯುತ್ತಿರುವ ಪಂದ್ಯದ 4ನೇ ದಿನದಂದು 2ನೇ ಇನ್ನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯಾ, 3 ವಿಕೆಟ್ ನಷ್ಟಕ್ಕೆ 227 ರನ್ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಕಾಂಗರೂ ಪಡೆಯ 351 ರನ್ಗಳ ಟಾರ್ಗೆಟ್ ಬೆನ್ನತ್ತಿರುವ ಪಾಕ್ ಪಡೆ, 4ನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 73 ರನ್ಗಳಿಸಿದೆ. ಪಾಕ್ ಗೆಲುವಿಗೆ 278 ರನ್ಗಳ ಅಗತ್ಯವಿದ್ದು, ಕೊನೆಯ ದಿನದಾಟ ಕುತೂಹಲ ಮೂಡಿಸಿದೆ.
ಐತಿಹಾಸಿ ಟೆಸ್ಟ್ ಸರಣಿ ಗೆಲುವಿನ ನಿರೀಕ್ಷೆಯಲ್ಲಿರುವ ಉಭಯ ತಂಡಗಳು 4ನೇ ದಿನದಂದು ಪೈಪೋಟಿಯ ಪ್ರದರ್ಶನ ನೀಡಿತು. 3ನೇ ದಿನದ ಮೊತ್ತ 11/0 ರನ್ಗಳಿಂದ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾಕ್ಕೆ, ಡೇವಿಡ್ ವಾರ್ನರ್(51) ಹಾಗೂ ಉಸ್ಮಾನ್ ಖವಾಜ(104*) ಮೊದಲ ವಿಕೆಟ್ಗೆ 96 ರನ್ಗಳ ಉತ್ತಮ ಆರಂಭ ನೀಡಿದರು. ಆದರೆ ನಂತರ ಬಂದ ಮಾರ್ನಸ್ ಲಬುಸ್ಚೆಗ್ನೆ(36) ಹಾಗೂ ಸ್ಟೀವ್ ಸ್ಮಿತ್(17) ನಿರೀಕ್ಷಿತ ಪ್ರದರ್ಶನ ನೀಡಿಲಿಲ್ಲ.
ಆದರೆ ಜವಾಬ್ದಾರಿಯುತ ಆಟವಾಡಿದ ಉಸ್ಮಾನ್ ಖವಾಜ, ಮತ್ತೊಮ್ಮೆ ಆಸೀಸ್ ತಂಡಕ್ಕೆ ಆಸರೆಯಾದರು. ಪಾಕ್ ಬೌಲಿಂಗ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಖವಾಜ, ಪ್ರಸ್ತುತ ಸರಣಿಯ 2 ಹಾಗೂ ತಮ್ಮ ಟೆಸ್ಟ್ ವೃತ್ತಿ ಜೀವನದ 12ನೇ ಶತಕ ಬಾರಿಸಿ ಮಿಂಚಿದರು. ಅಂತಿಮವಾಗಿ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 227 ರನ್ಗಳಿಸಿದ್ದಾಗ 2ನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಮೊದಲ ಇನ್ನಿಂಗ್ಸ್ನಲ್ಲಿ ಪಡೆದ 123 ರನ್ಗಳೊಂದಿಗೆ ಪಾಕಿಸ್ತಾನಕ್ಕೆ 350 ರನ್ಗಳ ಟಾರ್ಗೆಟ್ ನೀಡಿದೆ.
ಆಸೀಸ್ ನೀಡಿದ ಕಠಿಣ ಗುರಿ ಬೆನ್ನತ್ತಿರುವ ಪಾಕಿಸ್ತಾನಕ್ಕೆ ಆರಂಭಿಕರಾದ ಇಮಾಮ್-ಉಲ್-ಹಕ್(42*) ಹಾಗೂ ಅಬ್ದುಲ್ಲಾ ಶಫೀಕ್(27*) ಉತ್ತಮ ಆರಂಭ ಒದಗಿಸಿದ್ದಾರೆ. ಕಾಂಗರೂ ಪಡೆಯ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಈ ಜೋಡಿ, ತಂಡಕ್ಕೆ ಭದ್ರ ಅಡಿಪಾಯ ಹಾಕಿದ್ದು, ಪಂದ್ಯದ 5ನೇ ದಿನದಾಟ ಕುತೂಹಲ ಮೂಡಿಸಿದೆ.