ಬ್ಯಾಟ್ಸ್ಮನ್ಗಳ ಸ್ಪೋಟಕ ಆಟದ ನೆರವಿನಿಂದ ಏಷ್ಯನ್ ಗೇಮ್ಸ್ನ ಟಿ20 ಪಂದ್ಯದಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ ತಂಡ 300ಕ್ಕೂ ಅಧಿಕ ರನ್ಗಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ.
ಹ್ಯಾಂಗ್ಝೌದ ಪಿಂಗ್ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನೇಪಾಳ ಬ್ಯಾಟ್ಸ್ಮನ್ಗಳು, ಎದುರಾಳಿ ತಂಡದ ಬೌಲರ್ಗಳನ್ನ ಧೂಳಿಪಟ ಮಾಡಿದರು. ಪರಿಣಾಮ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 314 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ. ಆ ಮೂಲಕ ಟಿ20 ಕ್ರಿಕೆಟ್ನ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ಗಳಿಸಿದ ತಂಡವಾಗಿ ವಿಶ್ವ ದಾಖಲೆ ನಿರ್ಮಿಸಿದೆ.
ಕುಶಾಲ್ ಮಲ್ಲಾ ಅಬ್ಬರ:
ನೇಪಾಳ ಪರ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ 19 ವರ್ಷದ ಎಡಗೈ ಬ್ಯಾಟರ್ ಕುಶಾಲ್ ಮಲ್ಲಾ, ಕೇವಲ 50 ಬಾಲ್ಗಳಲ್ಲಿ 12 ಸಿಕ್ಸ್ ಹಾಗೂ 8 ಬೌಂಡರಿ ನೆರವಿನಿಂದ 274ರ ಸ್ಟ್ರೈಕ್ ರೇಟ್ನಲ್ಲಿ 137* ರನ್ಗಳಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಾಯಕ ರೋಹಿತ್ ಪೌದೇಲ್ ಸಹ 27 ಬಾಲ್ಗಳಲ್ಲಿ 6 ಸಿಕ್ಸ್ ಹಾಗೂ 2 ಬೌಂಡರಿ ಮೂಲಕ 61 ರನ್ಗಳಿಸಿ ಮಿಂಚಿದರೆ. ಕೊನೆ ಹಂತದಲ್ಲಿ ಬಂದ ದಿಪೇಂದ್ರ ಸಿಂಗ್, 10 ಬಾಲ್ಗಳಲ್ಲಿ 8 ಸಿಕ್ಸ್ ನೆರವಿನೊಂದಿಗೆ 520ರ ಸ್ಟ್ರೈಕ್ ರೇಟ್ನೊಂದಿಗೆ 52* ರನ್ಗಳಿಸಿ ಅಬ್ಬರಿಸಿದರು. ಇದಕ್ಕೂ ಮುನ್ನ ಆರಂಭಿಕರಾದ ಕುಶಾಲ್ ಬರ್ತೇಲ್(19) ಹಾಗೂ ಆಸೀಫ್ ಶೇಖ್(16) ರನ್ಗಳಿಸಿದರು.
41ಕ್ಕೆ ಮಂಗೋಲಿಯಾ ಆಲೌಟ್:
ನೇಪಾಳ ನೀಡಿದ 315 ರನ್ಗಳ ಅಸಾಧಾರಣ ಟಾರ್ಗೆಟ್ ಬೆನ್ನತ್ತಿದ ಮಂಗೋಲಿಯಾ, 13.1 ಓವರ್ಗಳಲ್ಲಿ 41 ರನ್ಗಳಿಸಿ ಆಲೌಟ್ ಆಯಿತು. ಪರಿಣಾಮ ನೇಪಾಳ ತಂಡ 273 ರನ್ಗಳ ಭಾರೀ ಅಂತರ ಗೆಲುವು ಸಾಧಿಸಿತು. ನೇಪಾಳ ಪರ ಕೆಸಿ ಕರಣ್, ಬೊಹಾರ ಹಾಗೂ ಸಂದೀಪ್ ಲಮಿಚನ್ನೆ ತಲಾ 2 ವಿಕೆಟ್ ಪಡೆದರೆ. ಸೋಮ್ಪಾಲ್ ಕಮಿ, ದೀಪೇಂದ್ರ ಸಿಂಗ್ ಹಾಗೂ ಕುಶಾಲ್ ಬರ್ತೇಲ್ ತಲಾ 1 ವಿಕೆಟ್ ಪಡೆದರು.
ವಿಶ್ವದಾಖಲೆ ಬರೆದ ನೇಪಾಳ:
ಕುಶಾಲ್ ಮಲ್ಲಾ(137*) ಹಾಗೂ ದೀಪೇಂದ್ರ ಸಿಂಗ್(52*) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 314 ರನ್ಗಳಿಸಿದ ನೇಪಾಳ ಆ ಮೂಲಕ ಟಿ20 ಕ್ರಿಕೆಟ್ನಲ್ಲಿ ವಿಶ್ವದಾಖಲೆ ನಿರ್ಮಿಸಿದೆ. ಇದಕ್ಕೂ ಮುನ್ನ 2019ರಲ್ಲಿ ಐರ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ 278/3 ರನ್ಗಳಿಸಿದ್ದ ಟಿ20 ಕ್ರಿಕೆಟ್ನ ಗರಿಷ್ಠ ಸ್ಕೋರ್ ಆಗಿತ್ತು.
T20Iನ ಗರಿಷ್ಠ ಸ್ಕೋರ್ಗಳು:
1. ನೇಪಾಳ – 314/4 vs ಮಂಗೋಲಿಯಾ (2023)
2. ಅಫ್ಘಾನಿಸ್ತಾನ – 278/3 vs ಐರ್ಲೆಂಡ್ (2019)
3. ಜೆಕ್ ರಿಪಬ್ಲಿಕ್ – 278/4 vs ಟರ್ಕಿ (2019)
4. ಆಸ್ಟ್ರೇಲಿಯಾ – 263/3 vs ಶ್ರೀಲಂಕಾ (2016)
5. ಶ್ರೀಲಂಕಾ 260/6 vs ಕೀನ್ಯಾ (2007)
Asian Games, Nepal, Mongolia, T20I Cricket, Sports Karnataka