ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಕೆಲವು ದಿನಗಳಷ್ಟೇ ಬಾಕಿ ಉಳಿದಿದ್ದು, ಅಕ್ಟೋಬರ್ 5ರಿಂದ ಆರಂಭವಾಗುವ ವಿಶ್ವಕಪ್ ಹಿನ್ನೆಲೆಯಲ್ಲಿ ಭಾರತ ತಂಡದ ಆಟಗಾರರು ಧರಿಸಲಿರುವ ಜರ್ಸಿಯನ್ನ ಅಡಿಡಾಸ್ ಬುಧವಾರ ಅನಾವರಣಗೊಳಿಸಿದೆ.
ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಆಟಗಾರರು ಧರಿಸಲಿರುವ ಜರ್ಸಿಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಕಿಟ್ನ ಥೀಮ್ ಅದೇ ರೀತಿಯಲ್ಲಿದ್ದರೂ, ವಿಶ್ವಕಪ್ ಜರ್ಸಿಯಲ್ಲಿ ಭುಜದ ಮೇಲೆ ಬಿಳಿ ಪಟ್ಟಿಗಳ ಬದಲಾಗಿ ಭಾರತದ ತ್ರಿವರ್ಣ ಧ್ವಜದ ಬಣ್ಣದೊಂದಿಗೆ ಬದಲಾಯಿಸಲಾಗಿದೆ. ಇದರೊಂದಿಗೆ 1983 ಮತ್ತು 2011ರಲ್ಲಿ ಭಾರತದ ಏಕದಿನ ವಿಶ್ವಕಪ್ ಗೆಲುವುಗಳನ್ನು ಸೂಚಿಸುವ ತಂಡದ ಲಾಂಛನದಲ್ಲಿ ಮೂರು ಸ್ಟಾರ್ಗಳ ಬದಲಿಗೆ ಎರಡು ನಕ್ಷತ್ರಗಳನ್ನ ಹಾಕಲಾಗಿದೆ.
ಭಾರತ ತಂಡದ ಕಿಟ್ ಪ್ರಾಯೋಜಕತ್ವ ಅಡಿಡಾಸ್ ಕಂಪನಿಯ ಪಾಲಾದ ಬಳಿಕ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಈ ಹಿಂದೆ ಅಡಿಡಾಸ್ ಪ್ರಾಯೋಜಕತ್ವದ ಜರ್ಸಿ ಧರಿಸಿ ಆಡಿದ್ದ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ನಲ್ಲಿ ಸರಣಿ ಗೆಲುವು ಸಾಧಿಸಿತ್ತು. ಬಳಿಕ ಕಳೆದ ವಾರಾಂತ್ಯದಲ್ಲಿ ಶ್ರೀಲಂಕಾವನ್ನು ಏಷ್ಯಾಕಪ್ ಫೈನಲ್ನಲ್ಲಿ 10 ವಿಕೆಟ್ಗಳಿಂದ ಸೋಲಿಸಿ 8ನೇ ಬಾರಿಗೆ ಏಷ್ಯಾಕಪ್ ಪ್ರಶಸ್ತಿ ಗೆದ್ದುಬೀಗಿತ್ತು. ಇದೀಗ ವಿಶ್ವಕಪ್ನತ್ತ ಮುಖ ಮಾಡಿರುವ ಭಾರತ ತಂಡ ಇದಕ್ಕೂ ಮುನ್ನ ಸೆ.22ರಿಂದ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ODI ಸರಣಿ ಆಡಲಿದೆ.
ಪ್ರಸಕ್ತ ವರ್ಷದ ಮೇ 23ರಂದು ಬಿಸಿಸಿಐ ಭಾರತ ಕ್ರಿಕೆಟ್ ತಂಡದ ಜರ್ಸಿ ಪ್ರಾಯೋಜಕತ್ವದ ಪಾಲುದಾರಿಕೆಯನ್ನು ಘೋಷಿಸಿದಾಗ ಅಡಿಡಾಸ್ ಕಂಪನಿ ಭಾರತದ ಕಿಟ್ ಪ್ರಾಯೋಜಕತ್ವ ಪಡೆದಿತ್ತು. ಇದಕ್ಕೂ ಮುನ್ನ ಟೀಂ ಇಂಡಿಯಾದ ಕಿಟ್ ಪ್ರಾಯೋಜಕರಾದ MPL ತನ್ನ ಒಪ್ಪಂದವನ್ನು ಕೊನೆಗೊಳಿಸಲು ನಿರ್ಧರಿಸಿದ ಬಳಿಕ ಅಡಿಡಾಸ್, ಕಿಟ್ ಪ್ರಾಯೋಜಕತ್ವ ಪಡೆದುಕೊಂಡಿತ್ತು. ಅದರಂತೆ ಅಡಿಡಾಸ್ ಮತ್ತು ಬಿಸಿಸಿಐ ನಡುವೆ ಐದು ವರ್ಷಗಳಿಗೆ ಒಪ್ಪಂದ ಮಾಡಿಕೊಂಡಿದ್ದು, ಅಂದಾಜು 250 ಕೋಟಿ ರೂ. ಮೌಲ್ಯದ ಒಪ್ಪಂದ ಇದಾಗಿದೆ ಎನ್ನಲಾಗಿದೆ. ಹೀಗಾಗಿ 2028ರ ಮಾರ್ಚ್ ತಿಂಗಳವರೆಗೆ ಭಾರತ ಆಡುವ ಪ್ರತಿ ಪಂದ್ಯಕ್ಕೂ ಅಡಿಡಾಸ್ 65 ಲಕ್ಷ ರೂ. ಪಾವತಿಸುವ ನಿರೀಕ್ಷೆಯಿದೆ.
World Cup, Indian Team, Adidas, kit sponsor, BCCI, Sports Karnataka