ನಾಯಕ ಹಶ್ಮತುಲ್ಲ ಶಹೀದಿ(59) ಹಾಗೂ ಮೊಹಮ್ಮದ್ ನಬಿ(65) ಅವರ ಕೆಚ್ಚೆದೆಯ ಹೋರಾಟದ ನಡುವೆಯೂ ಶ್ರೀಲಂಕಾ ವಿರುದ್ದ 2 ರನ್ಗಳ ವಿರೋಚಿತ ಸೋಲನುಭವಿಸಿದ ಅಫ್ಘಾನಿಸ್ತಾನ, 2023ರ ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದರೆ, ಲಂಕಾ ತಂಡ ಸೂಪರ್-4 ಹಂತಕ್ಕೆ ಪ್ರವೇಶ ಪಡೆದಿದೆ.
ಲಾಹೋರ್ನ ಗಢಾಫಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎರಡು ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 50 ಓವರ್ಗಳಲ್ಲಿ 8 ವಿಕೆಟ್ಗೆ 291 ರನ್ಗಳಿಸಿತು. ಸೂಪರ್-4 ಹಂತಕ್ಕೆ ಪ್ರವೇಶ ಪಡೆಯಲು ಅಫ್ಘಾನಿಸ್ತಾನ 37.1 ಓವರ್ಗಳಲ್ಲಿ ಈ ಗುರಿಯನ್ನ ತಲುಪಬೇಕಿತ್ತು. ಆದರೆ ಗೆಲುವಿನ ಹೊಸ್ತಿಲಲ್ಲಿ ಎಡವಿದ ಅಫ್ಘಾನಿಸ್ತಾನ 37.4 ಓವರ್ನಲ್ಲಿ 289 ರನ್ಗಳಿಗೆ ಆಲೌಟ್ ಆಗುವ ಮೂಲಕ 2 ರನ್ಗಳ ಸೋಲುನ ಆಘಾತ ಅನುಭವಿಸಿದರೆ. ನಿರ್ಣಾಯಕ ಹಂತದಲ್ಲಿ ಬಲಿಷ್ಠ ಕಮ್ಬ್ಯಾಕ್ ಮಾಡಿದ ಶ್ರೀಲಂಕಾ ಈ ಗೆಲುವಿನೊಂದಿಗೆ 4ನೇ ತಂಡವಾಗಿ ಸೂಪರ್-4 ಪ್ರವೇಶಿಸುವಲ್ಲಿ ಯಶಸ್ವಿಯಾಯಿತು.
ಲಂಕಾಗೆ ಮೆಂಡಿಸ್ ಆಸರೆ:
ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಉತ್ತಮ ಆರಂಭ ಪಡೆಯಿತು. ಇನ್ನಿಂಗ್ಸ್ ಆರಂಭಿಸಿದ ನಿಸ್ಸಂಕಾ(41) ಹಾಗೂ ಕರುಣಾರತ್ನೆ(32) ಪ್ರಥಮ ವಿಕೆಟ್ಗೆ 63 ರನ್ ಕಲೆಹಾಕಿದರು. ಆದರೆ 23 ರನ್ಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಕಣಕ್ಕಿಳಿದ ಕುಸಲ್ ಮೆಂಡಿಸ್(92 ರನ್, 84 ಬಾಲ್, 6 ಬೌಂಡರಿ, 3 ಸಿಕ್ಸ್) ಜವಾಬ್ದಾರಿಯ ಆಟದಿಂದ ತಂಡಕ್ಕೆ ಆಸರೆಯಾದರು. ಅಸಲಂಕ(36) ಜೊತೆಗೂಡಿ 4ನೇ ವಿಕೆಟ್ಗೆ 102 ರನ್ಗಳ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ವೈಯಕ್ತಿಕ 92 ರನ್ಗಳಿಸಿ ಶತಕದತ್ತ ಸಾಗುತ್ತಿದ್ದ ಮೆಂಡಿಸ್, ಅನಿರೀಕ್ಷಿತ ರೀತಿಯಲ್ಲಿ ರನೌಟ್ ಆಗುವ ಮೂಲಕ ಶತಕ ವಂಚಿತರಾದರು. ನಂತರ ಕೆಳ ಕ್ರಮಾಂಕದಲ್ಲಿ ಬಂದ ವೆಲ್ಲಾಲಗೆ(33*) ಹಾಗೂ ತೀಕ್ಷಣ(28) ಉತ್ತಮ ಬ್ಯಾಟಿಂಗ್ನಿಂದ ಉಪಯುಕ್ತ ರನ್ಗಳಿಸುವ ಮೂಲಕ ತಂಡದ ಮೊತ್ತವನ್ನ 291ಕ್ಕೆ ಏರಿಸಿದರು. ಅಫ್ಘಾನ್ ಪರ ಗುಲ್ಬದಿನ್(4/60), ರಶೀದ್ ಖಾನ್(2/63) ಹಾಗೂ ಮುಜೀಬ್(1/60) ವಿಕೆಟ್ ಪಡೆದುಕೊಂಡರು.
ಶಹೀದಿ-ನಬಿ ಅಬ್ಬರ:
ಶ್ರೀಲಂಕಾ ನೀಡಿದ 292 ರನ್ಗಳ ಟಾರ್ಗೆಟ್ ಬೆನ್ನತ್ತಿದ ಅಫ್ಘಾನಿಸ್ತಾನಕ್ಕೆ ಸೂಪರ್-4 ಹಂತ ಪ್ರವೇಶಿಸಬೇಕಾದರೆ 37.1 ಓವರ್ಗಳಲ್ಲಿ ಟಾರ್ಗೆಟ್ ಚೇಸ್ ಮಾಡುವ ಸವಾಲು ಎದುರಾಯಿತು. ಆದರೆ ತಂಡದ ಪರವಾಗಿ ಇನ್ನಿಂಗ್ಸ್ ಆರಂಭಿಸಿದ ಗುರ್ಬಾಜ಼್(4) ಹಾಗೂ ಝದ್ರಾನ್(7) ಬಹುಬೇಗನೆ ವಿಕೆಟ್ ಒಪ್ಪಿಸಿದರು. ಆದರೆ ನಂತರ ಜೊತೆಯಾದ ಗುಲ್ಬದಿನ್ ನೈಬ್(22) ಹಾಗೂ ರಮತ್ ಶಾ(45) ಬಿರುಸಿನ ಆಟದಿಂದ ತಂಡಕ್ಕೆ ಸ್ವಲ್ಪಮಟ್ಟಿನ ಚೇತರಿಕೆ ನೀಡಿದರು.
ಆದರೆ ಈ ಹಂತದಲ್ಲಿ ಜೊತೆಯಾದ ನಾಯಕ ಹಶ್ಮತುಲ್ಲ ಶಹೀದಿ(59 ರನ್, 66 ಬಾಲ್, 3 ಬೌಂಡರಿ, 1 ಸಿಕ್ಸ್) ಹಾಗೂ ಮೊಹಮ್ಮದ್ ನಬಿ(65 ರನ್, 32 ಬಾಲ್, 6 ಬೌಂಡರಿ, 5 ಸಿಕ್ಸ್) ಸ್ಪೋಟಕ ಬ್ಯಾಟಿಂಗ್ ಮೂಲಕ 5ನೇ ವಿಕೆಟ್ಗೆ 80 ರನ್ಗಳಿಸಿ ತಂಡದ ಗೆಲುವಿನ ಆಸೆಯನ್ನ ಜೀವಂತ ಇರಿಸಿದರು. ನಂತರದಲ್ಲಿ ಬಂದ ಜನತ್(23), ನಜೀಬುಲ್ಲ ಝದ್ರಾನ್(23), ರಶೀದ್ ಖಾನ್(27*) ಬಿರುಸಿನ ಆಟವಾಡಿದರು. ಪರಿಣಾಮ 37 ಓವರ್ ಅಂತರಕ್ಕೆ 289 ರನ್ಗಳಿಸಿದ್ದ ಅಫ್ಘಾನಿಸ್ತಾನಕ್ಕೆ ಗೆಲ್ಲಲು 1 ಬಾಲ್ನಲ್ಲಿ 3 ರನ್ಗಳ ಅಗತ್ಯವಿತ್ತು. ಆದರೆ ಈ ಟಾರ್ಗೆಟ್ ಚೇಸ್ ಮಾಡವಲ್ಲಿ ಎಡವಿದ ಅಫ್ಘಾನಿಸ್ತಾನ 289 ರನ್ಗಳಿಗೆ ಆಲೌಟ್ ಆಗಿ ಸೋಲು ಕಂಡಿತು. ಲಂಕಾ ಪರ ರಜಿತ(4/79), ವೆಲ್ಲಾಲಗೆ(2/36) ಹಾಗೂ ಧನಂಜಯ(2/12) ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಉತ್ತಮ ಬ್ಯಾಟಿಂಗ್ನಿಂದ ತಂಡದ ಗೆಲುವಿಗೆ ಕಾರಣವಾದ ಕುಸಲ್ ಮೆಂಡಿಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
SL v AFG, Afghanistan, Sri Lanka, Asia Cup, Sports Karnataka