ಏಷ್ಯಾಕಪ್-2023 ಟೂರ್ನಿಯ ಸೂಪರ್-4 ಹಂತಕ್ಕೆ ಪ್ರವೇಶ ಪಡೆದಿರುವ ಬಾಂಗ್ಲಾದೇಶಕ್ಕೆ ದೊಡ್ಡ ಆಘಾತ ಎದುರಾಗಿದ್ದು, ತಂಡದ ಪ್ರಮುಖ ಬ್ಯಾಟರ್ ನಜ್ಮುಲ್ ಹೊಸೈನ್ ಶಾಂಟೊ, ಗಾಯದ ಸಮಸ್ಯೆ ಕಾರಣದಿಂದ ಏಷ್ಯಾಕಪ್ನಿಂದ ಹೊರಗುಳಿದಿದ್ದಾರೆ. ಇವರ ಬದಲಿಗೆ ಲಿಟ್ಟನ್ ದಾಸ್ ಅವರನ್ನ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋತಿದ್ದ ಬಾಂಗ್ಲಾದೇಶ ನಂತರ 2ನೇ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿ ಸೂಪರ್-4 ಹಂತ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಶಾಂಟೊ, ಅಮೋಘ ಶತಕ ಬಾರಿಸಿ ತಂಡದ ಗೆಲುವಿಗೆ ಕಾರಣವಾಗಿದ್ದರು. ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದ್ದ ಶಾಂಟೊ, 105 ಬಾಲ್ಗಳಲ್ಲಿ 104 ರನ್ಗಳಿಸಿ ಮಿಂಚಿದ್ದರು. ಪರಿಣಾಮ ಬಾಂಗ್ಲಾದೇಶ 334 ರನ್ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಬಳಿಕ ಅಫ್ಘಾನಿಸ್ತಾನವನ್ನು 89 ರನ್ಗಳಿಂದ ಸೋಲಿಸಿತ್ತು.
ಆದರೆ ಸೂಪರ್-4 ಪಂದ್ಯಗಳು ಆರಂಭಕ್ಕೂ ಮುನ್ನವೇ ಶಾಂಟೊ ಅವರು ಗಾಯದ ಸಮಸ್ಯೆಯ ಕಾರಣದಿಂದ ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ತಂಡದ ಪ್ರಮುಖ ಬ್ಯಾಟರ್ ಆಗಿದ್ದ ನಜ್ಮುಲ್ ಶಾಂಟೊ, ಟೂರ್ನಿಯಿಂದ ಔಟ್ ಆಗಿರುವುದು ಬಾಂಗ್ಲಾದೇಶಕ್ಕೆ ದೊಡ್ಡ ಹಿನ್ನಡೆ ಉಂಟು ಮಾಡಿದೆ. ಈ ನಡುವೆ ಶಾಂಟೊ ಅವರ ಅಲಭ್ಯತೆ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ತಂಡದ ಅನುಭವಿ ಬ್ಯಾಟರ್ ಲಿಟನ್ ದಾಸ್ ಅವರನ್ನ ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ.
ಟೂರ್ನಿಯ ಆರಂಭಕ್ಕೂ ಮೊದಲೇ ಗಾಯಾಳುಗಳ ಸಮಸ್ಯೆಗೆ ಸಿಲುಕಿದ್ದ ಬಾಂಗ್ಲಾದೇಶಕ್ಕೆ ಮೆಹಿದಿ ಹಸನ್ ಮಿರಾಜ್, ಮುಸ್ತಫಿಜುರ್ ರೆಹಮಾನ್ ಅವರಂತಹ ಪ್ರಮುಖ ಆಟಗಾರರ ಅಲಭ್ಯತೆ ಉಂಟಾಗಿತ್ತು. ಈ ನಡುವೆ ನಜ್ಮುಲ್ ಶಾಂಟೊ ಕೂಡ ತಂಡದಿಂದ ಹೊರಗುಳಿದಿರುವುದು ಬಾಂಗ್ಲಾ ತಂಡದ ಬ್ಯಾಟಿಂಗ್ ಬಲವನ್ನ ಕಡಿಮೆ ಮಾಡುವ ಸಾಧ್ಯತೆ ಇದೆ.
Asia Cup, Bangladesh, Najmul Hossain Shanto, Litton Das, Sports Karnataka