ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆಎಲ್ ರಾಹುಲ್, ಏಷ್ಯಾಕಪ್-2023 ಟೂರ್ನಿಯ ಯಾವುದೇ ಪಂದ್ಯಗಳಿಗೆ ಫಿಟ್ ಆಗುವ ಯಾವುದೇ ಗ್ಯಾರೆಂಟಿ ಇಲ್ಲ ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹೇಳಿದ್ದಾರೆ.
ಈ ಬಗ್ಗೆ ಖಾಸಗಿ ಕ್ರೀಡಾವಾಹಿನಿಯೊಂದರಲ್ಲಿ ಮಾತನಾಡಿರುವ ಮೊಹಮ್ಮದ್ ಕೈಫ್, “ಪ್ರಸ್ತುತ ರಾಹುಲ್ ಫಿಟ್ ಇಲ್ಲ ಎನ್ನುವುದಾದರೆ, ಟೂರ್ನಿಯ ಯಾವುದೇ ಪಂದ್ಯಗಳಿಗೆ ಅವರು ಫಿಟ್ ಆಗುವ ಗ್ಯಾರೆಂಟಿ ಇಲ್ಲ. ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ಅಲ್ಲ. ಏಕೆಂದರೆ ರಾಹುಲ್ 5ನೇ ಕ್ರಮಾಂಕದಲ್ಲಿ ಉತ್ತಮವಾಗಿ ಆಡಬಲ್ಲರು ಹಾಗೂ ಅವರ ಅಂಕಿಅಂಶಗಳು ಸಹ ಉತ್ತಮವಾಗಿದೆ”. ಅಲ್ಲದೇ “ಅವರಿಗೆ ಯಾವ ಹಂತದಲ್ಲಿ ಆಟದ ವೇಗ ಹೆಚ್ಚಿಸಬೇಕೆಂಬುದು ಚೆನ್ನಾಗಿ ಗೊತ್ತಿದೆ. ಯಾವ ರೀತಿ ಇನ್ನಿಂಗ್ಸ್ ಕಟ್ಟಬೇಕು ಮತ್ತು ಯಾವ ರೀತಿ ದೊಡ್ಡ ಹೊಡೆತಗಳನ್ನ ಹೊಡೆಯಬೇಕೆಂದು ಅವರಿಗೆ ಗೊತ್ತಿದೆ. ಅಲ್ಲದೇ ಕೆಎಲ್ ರಾಹುಲ್ ಉತ್ತಮ ಫಿನಿಶರ್ ಸಹ ಆಗಿದ್ದು, ಅವರ ಬದಲಿಗೆ ಇಶಾನ್ ಕಿಶನ್ ಅವರನ್ನ ಆಡಿಸಿದರು, ಸೂಕ್ತ ಬದಲಾವಣೆ ಆಗಲಾರದು” ಎಂದಿದ್ದಾರೆ.
ಈ ನಡುವೆ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಮೊಹಮ್ಮದ್ ಕೈಫ್, “ಗಿಲ್ ಅವರ ಫಾರ್ಮ್ ಸ್ವಲ್ಪಮಟ್ಟಿಗೆ ಇಳಿಮುಖವಾಗಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ನಿರೀಕ್ಷಿತ ರೀತಿಯಲ್ಲಿ ಆಡಲಿಲ್ಲ. ಆದರೆ ಕ್ಯಾಂಡಿ ಪಿಚ್ ಅವರಿಗೆ ಹೊಂದಿಕೊಳ್ಳುತ್ತದೆ. ಅವರು ವೇಗ ಮತ್ತು ಬೌನ್ಸ್ ಇಷ್ಟಪಡಲಿದ್ದಾರೆ. ಆದರೆ ಬಾಲ್ ಮೂವ್ಮೆಂಟ್ ಇರುವುದರಿಂದ ಟಾಪ್-3 ಬ್ಯಾಟರ್ಗಳಿಗೆ ಚಾಲೆಂಜ್ ಇರಲಿದೆ” ಎಂದು ತಿಳಿಸಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಅಭಿಯಾನ ಸೆಪ್ಟೆಂಬರ್ 2ರಿಂದ ಆರಂಭವಾಗಲಿದ್ದು, ಹೈವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನ ಎದುರಿಸಲಿದೆ.
Asia Cup, KL Rahul, Team India, Mohammad Kaif, Sports Karnataka