ಋತುರಾಜ್ ಗಾಯಕ್ವಾಡ್(57), ಡೆವೊನ್ ಕಾನ್ವೇ(47) ಭರ್ಜರಿ ಬ್ಯಾಟಿಂಗ್ ಹಾಗೂ ಮೊಯಿನ್ ಅಲಿ(4/26) ಅವರ ಪರಿಣಾಮಕಾರಿ ಬೌಲಿಂಗ್ನಿಂದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ 12 ರನ್ಗಳ ಗೆಲುವು ಸಾಧಿಸಿತು.
ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಸಿಎಸ್ಕೆ 20 ಓವರ್ಗಳಲ್ಲಿ 7 ವಿಕೆಟ್ಗೆ 217 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ಎಲ್ಎಸ್ಜಿ, 20 ಓವರ್ಗಳಲ್ಲಿ 205/7 ರನ್ಗಳಿಸಿ 12 ರನ್ಗಳ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಧೋನಿ ಪಡೆ 16ನೇ ಆವೃತ್ತಿಯ ಐಪಿಎಲ್ನಲ್ಲಿ ಗೆಲುವಿನ ಖಾತೆ ತೆರೆದರೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಗೆದ್ದಿದ್ದ ಲಕ್ನೋ ಸೋಲಿನ ಆಘಾತ ಕಂಡಿತು.
ಋತುರಾಜ್-ಕಾನ್ವೇ ಅಬ್ಬರ:
ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ) ತಂಡಕ್ಕೆ ಆರಂಭಿಕರು ಉತ್ತಮ ಅಡಿಪಾಯ ಹಾಕಿಕೊಟ್ಟರು. ಬ್ಯಾಟಿಂಗ್ ಫಾರ್ಮ್ ಮುಂದುವರಿಸಿದ ಋತುರಾಜ್(57 ರನ್, 31 ಬಾಲ್, 3 ಬೌಂಡರಿ, 4 ಸಿಕ್ಸ್) ಹಾಗೂ ಡೆವೊನ್ ಕಾನ್ವೇ(47 ರನ್, 29 ಬಾಲ್, 5 ಬೌಂಡರಿ, 2 ಸಿಕ್ಸ್) ಮೂಲಕ ಮೊದಲ ವಿಕೆಟ್ಗೆ 110 ರನ್ಗಳ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಉಳಿದಂತೆ ಶಿವಂ ದುಬೆ(27), ಮೊಯಿನ್ ಅಲಿ(19), ರಾಯುಡು(27*) ಹಾಗೂ ಧೋನಿ(12) ರನ್ಗಳಿಂದ ಚೆನ್ನೈ 217 ರನ್ ಕಲೆಹಾಕಲು ಸಾಧ್ಯವಾಯಿತು. ಲಕ್ನೋ ಪರ ಮಾರ್ಕ್ ವುಡ್ ಹಾಗೂ ರವಿ ಬಿಷ್ಣೋಯಿ ತಲಾ 3 ಹಾಗೂ ಅವೇಶ್ 1 ವಿಕೆಟ್ ಪಡೆದರು.
ಮೊಯಿನ್ ಸ್ಪಿನ್ ಕಮಾಲ್:
ಚೆನ್ನೈ ನೀಡಿದ 218 ರನ್ಗಳ ಕಠಿಣ ಟಾರ್ಗೆಟ್ ಚೇಸ್ ಮಾಡಿದ ಲಕ್ನೋ ತಂಡಕ್ಕೆ ಮೊಯಿನ್ ಅಲಿ(4/26) ಕಡಿವಾಣ ಹಾಕಿದರು. ಆರಂಭಿಕನಾಗಿ ಬಂದ ನಾಯಕ ಕೆಎಲ್ ರಾಹುಲ್(20) ಹಾಗೂ ಕೈಲ್ ಮೈಯರ್ಸ್(53 ರನ್, 22 ಬಾಲ್, 8 ಬೌಂಡರಿ, 2 ಸಿಕ್ಸ್) ಮೊದಲ ವಿಕೆಟ್ಗೆ 79 ರನ್ಗಳಿಸಿ ಉತ್ತಮ ಆರಂಭ ನೀಡಿದರು. ಚೊಚ್ಚಲ ಪಂದ್ಯದಲ್ಲೇ ಸ್ಪೋಟಕ ಆಟದ ಮೂಲಕ ಮಿಂಚಿದ್ದ ಮೈಯರ್ಸ್, ಪ್ರಸಕ್ತ ಆವೃತ್ತಿಯ 2ನೇ ಅರ್ಧಶತಕ ಸಿಡಿಸಿದರು. ಆದರೆ ನಂತರದಲ್ಲಿ ಬಂದ ದೀಪಕ್ ಹೂಡ(1), ಕೃನಾಲ್(9) ಮೊಯಿನ್ ಅಲಿ ದಾಳಿಗೆ ತತ್ತರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಸ್ಟಾಯ್ನಿಸ್(21), ಪೂರನ್(32), ಬದೋನಿ(23), ಗೌತಮ್(17*) ಹಾಗೂ ವುಡ್(10*) ರನ್ಗಳಿಸಿದರು ತಂಡಕ್ಕೆ ಗೆಲುವು ಸಿಗಲಿಲ್ಲ. ಚೆನ್ನೈ ತಂಡದ ಪರ ದೇಶಪಾಂಡೆ 2 ಹಾಗೂ ಸ್ಯಾಂಟ್ನರ್ 1 ವಿಕೆಟ್ ಪಡೆದರು.
IPL 2023, Chennai Super Kings, Lucknow Super Giants, MS Dhoni, KL Rahul