Cheteshwar Pujara – ಶತಕದ ಮೇಲೆ ಶತಕ.. ರಾಯಲ್ ಲಂಡನ್ ಟೂರ್ನಿಯಲ್ಲಿ ಪೂಜಾರ ಹವಾ..!
ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಅವರು ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ನಲ್ಲಿ ರನ್ ಗಳ ಸುರಿಮಳೆಗೈಯುತ್ತಿದ್ದಾರೆ.
ರಾಯಲ್ ಲಂಡನ್ ಕಪ್ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಚೇತೇಶ್ವರ ಪೂಜಾರ ಶತಕದ ಮೇಲೆ ಶತಕ ದಾಖಲಿಸುತ್ತಿದ್ದಾರೆ.
ಸಸೆಕ್ಸ್ ತಂಡದ ಪರ ಆಡುತ್ತಿರುವ ಪೂಜಾರ ಅವರು ಟೂರ್ನಿಯಲ್ಲಿ ಎರಡನೇ ಶತಕ ದಾಖಲಿಸಿದ್ದಾರೆ. ಅಲ್ಲದೆ ಲಿಸ್ಟ್ ಎ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದ್ದ ಹಿರಿಮೆಗೂ ಪಾತ್ರರಾಗಿದ್ದಾರೆ.
ವಾವ್ರಿಕ್ ಶೈರ್ ತಂಡದ ವಿರುದ್ಧ 79 ಎಸೆತಗಳಲ್ಲಿ 107 ರನ್ ಗಳಿಸಿದ್ದರು. ಇದೀಗ ಸರ್ರೆ ತಂಡದ ವಿರುದ್ಧ ಆಕರ್ಷಕ 174 ರನ್ ಸಿಡಿಸಿದ್ದಾರೆ. ಇದರೊಂದಿಗೆ ಸಸೆಕ್ಸ್ ತಂಡ ಆರು ವಿಕೆಟ್ ನಷ್ಟಕ್ಕೆ 378 ರನ್ ಗಳಿಸಿದೆ.
ಮೊದಲು ಬ್ಯಾಟ್ ಮಾಡಿದ್ದ ಸಸೆಕ್ಸ್ ತಂಡ 9 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಗಳನ್ನು ಕೈಚೆಲ್ಲಿಕೊಂಡಿತ್ತು. ನಂತರ ಟಾಮ್ ಕ್ಲಾಕ್ ಜೊತೆ ಸೇರಿಕೊಂಡ ಪೂಜಾರ ಅವರು ಮೂರನೇ ವಿಕೆಟ್ ಗಎ 205 ರನ್ ಪೇರಿಸಿದ್ರು. ಟಾಮ್ ಕ್ಲಾರ್ಕ್ ಅವರು 106 ಎಸೆತಗಳಲ್ಲಿ 104 ರನ್ ಗಳಿಸಿದ್ರು. ಚೇತೇಶ್ವರ ಪೂಜಾರ ಅವರು 131 ಎಸೆತಗಳಲ್ಲಿ 20 ಬೌಂಡರಿ ಮತ್ತು ಐದು ಸಿಕ್ಸರ್ ಗಳ ಸಹಾಯದಿಂದ 174 ರನ್ ದಾಖಲಿಸಿದ್ರು.
ಇನ್ನೊಂದೆಡೆ ವಾವ್ರಿಕ್ ಶೈರ್ ಪರ ಆಡುತ್ತಿರುವ ಭಾರತದ ಆಲ್ ರೌಂಡರ್ ಕೃನಾಲ್ ಪಾಂಡ್ಯ ಅವರು ಲೈಸ್ಟರ್ ಶೈರ ತಂಡದ ವಿರುದ್ಧ ಮೂರು ವಿಕೆಟ್ ಗಳನ್ನು ಕಬಳಿಸಿ ಗಮನ ಸೆಳೆದಿದ್ದಾರೆ. ಇನ್ನು ಮೆಡ್ಲೆಸೆಕ್ಸ್ ತಂಡದ ಪರ ಆಡುತ್ತಿರುವ ಉಮೇಶ್ ಯಾದವ್ ಸಮರ್ ಸೆಟ್ ತಂಡದ ವಿರುದ್ಧ ಎರಡು ವಿಕೆಟ್ ಪಡೆದುಕೊಂಡಿದ್ದಾರೆ. ಇದರೊಂದಿಗೆ ಉಮೇಶ್ ಯಾದವ್ ನಾಲ್ಕು ಪಂದ್ಯಗಳಲ್ಲಿ 13 ವಿಕೆಟ್ ಗಳನ್ನು ಉರುಳಿಸಿದ್ದಾರೆ.
ಇನ್ನು ಕೆಂಟ್ ತಂಡದ ಪರ ಆಡುತ್ತಿರುವ ನವದೀಪ್ ಸೈನಿ ಅವರು ನಾರ್ಥಾಂಪ್ಟನ್ ಶೈರ್ ವಿರುದ್ದ ವಿಕೆಟ್ ಪಡೆಯಲು ವಿಫಲರಾದ್ರು.