ಐಪಿಎಲ್ ಸೀಸನ್ 15ಕ್ಕೆ ಎಲ್ಲಾ ತಯಾರಿಗಳು ನಡೆಯುತ್ತಿವೆ. 2 ಹೊಸ ತಂಡಗಳ ಸೇರ್ಪಡೆ ಐಪಿಎಲ್ ರೋಚಕತೆಯನ್ನು ಉತ್ತುಂಗಕ್ಕೆ ಏರಿಸಲಿದೆ. ಹಳೆಯ 8 ಫ್ರಾಂಚೈಸಿಗಳು ತಮಗೆ ಬೇಕಾಗಿರುವ ಒಟ್ಟು 27 ಆಟಗಾರರನ್ನು ರಿಟೈನ್ ಮಾಡಿಕೊಂಡಿವೆ. ಲಖ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳು, ಆಕ್ಷನ್ ಪೂಲ್ನಲ್ಲಿರುವ ತಲಾ 3 ಆಟಗಾರರನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ನೀಡಿದೆ. ಇದೆಲ್ಲಾ ಆದ ಬಳಿಕ ಆಟಗಾರರ ಮೆಗಾ ಹರಾಜು ನಡೆಯಲಿದೆ.
ಈ ಹಿಂದೆ ಬಿಸಿಸಿಐ ಹೊಸ ಎರಡು ಫ್ರಾಂಚೈಸಿಗಳಿಗೆ ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಡಿಸೆಂಬರ್ 25ರ ತನಕ ಗಡುವು ನೀಡಿತ್ತು. ಜನವರಿ ಮೊದಲ ವಾರದಲ್ಲಿ ಆಟಗಾರರ ಮೆಗಾ ಹರಾಜು ನಡೆಸುವ ಯೋಚನೆಯಲ್ಲಿತ್ತು. ಆದರೆ ಈಗ ಮೆಗಾ ಹರಾಜು ಪ್ರಕ್ರಿಯೆಯನ್ನು ಒಂದು ವಾರಗಳ ಕಾಲ ಮುಂದೂಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಅಹಮದಾಬಾದ್ ಫ್ರಾಂಚೈಸಿಯನ್ನು ಖರೀದಿಸಿರುವ CVC ಕ್ಯಾಪಿಟಲ್ ಪಾರ್ಟ್ನರ್ಸ್ ಬಗ್ಗೆ ಅಪಸ್ವರಗಳು ಕೇಳಿ ಬಂದಿದ್ದವು. ಈ ಕಂಪೆನಿಯು ಬೆಟ್ಟಿಂಗ್ ಕಂಪನಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದ ಕಾರಣ ಸಿವಿಸಿ ಮಾಲೀಕತ್ವನ್ನು ರದ್ದುಪಡಿಸಬೇಕೆಂಬ ಆಗ್ರಹಗಳು ಕೇಳಿಬಂದಿತ್ತು. ಇದೀಗ ಈ ಬಗ್ಗೆ ಚರ್ಚೆ ನಡೆಸಿರುವ ಬಿಸಿಸಿಐ, ಸಿವಿಸಿ ಕ್ಯಾಪಿಟಲ್ ಮಾಲೀಕರನ್ನೇ ಮುಂದುವರೆಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಬಿಸಿಸಿಐ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ವಿಳಂಬವಾಗಿದ್ದು, ಹೀಗಾಗಿ ಹೊಸ ತಂಡವು ಇದುವರೆಗೆ ಮೆಗಾ ಹರಾಜಿನ ಸಿದ್ದತೆಗಳನ್ನು ಶುರು ಮಾಡಿರಲಿಲ್ಲ.
ಹೊಸ ಫ್ರಾಂಚೈಸಿಗಳಿಗೆ ಅನುಕೂಲವಾಗುವಂತೆ ಮೆಗಾ ಹರಾಜನ್ನು ಒಂದು ವಾರಕ್ಕೆ ಮುಂದೂಡಲು ಬಿಸಿಸಿಐ ನಿರ್ಧರಿಸಿದೆ. ಅಷ್ಟೇ ಅಲ್ಲದೆ ಹೊಸ ಫ್ರಾಂಚೈಸಿಗಳಿಗೆ ತಲಾ 3 ಆಟಗಾರರ ಆಯ್ಕೆಗೆ ನೀಡಲಾದ ಗಡುವನ್ನು ಡಿಸೆಂಬರ್ 25 ರಿಂದ ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಆಟಗಾರರ ಮೆಗಾ ಹರಾಜು ಒಂದು ವಾರ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.