ಭಾರತ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಭರ್ಜರಿ ಶತಕ ಬಾರಿಸಿ ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾದ ಸ್ಟೀವ್ ಸ್ಮಿತ್, ಆ ಮೂಲಕ ಆಸೀಸ್ ತಂಡದ ಮಾಜಿ ನಾಯಕರಾದ ರಿಕಿ ಪಾಂಟಿಂಗ್ ಹಾಗೂ ಮೈಕಲ್ ಕ್ಲಾರ್ಕ್ ಅವರ ಜೊತೆಗೆ ಎಲೈಟ್ ಕ್ಲಬ್ ಸೇರಿದ್ದಾರೆ.
ಲಂಡನ್ನ ಓವಲ್ನಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದ ಮೊದಲ ದಿನದಾಟದಲ್ಲಿ ಅಜೇಯ 95 ರನ್ಗಳಿಸಿದ್ದ ಸ್ಟೀವ್ ಸ್ಮಿತ್, 2ನೇ ದಿನವೂ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಆ ಮೂಲಕ ತಮ್ಮ ಟೆಸ್ಟ್ ವೃತ್ತಿ ಬದುಕಿನ 31ನೇ ಶತಕ ದಾಖಲಿಸಿದ ಆಸೀಸ್ ಮಾಜಿ ಕ್ಯಾಪ್ಟನ್ ಅಂತಿಮವಾಗಿ 121 ರನ್ಗಳಿಸಿ ಶಾರ್ದೂಲ್ ಥಾಕೂರ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು.
ಈ ಶತಕದೊಂದಿಗೆ ಸ್ಟೀವ್ ಸ್ಮಿತ್ ಟೀಂ ಇಂಡಿಯಾ ವಿರುದ್ಧ ಮತ್ತೊಂದು ಅವಿಸ್ಮರಣೀಯ ಪ್ರದರ್ಶನ ನೀಡಿದರು. ಕಳೆದ ಹಲವು ವರ್ಷಗಳಿಂದ ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಆಸೀಸ್ ಸ್ಟಾರ್ ಬ್ಯಾಟರ್, ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಶತಕ ಬಾರಿಸುವ ಮೂಲಕ ಭಾರತದ ವಿರುದ್ಧ ತಮ್ಮ 9ನೇ ಶತಕ ದಾಖಲಿಸಿದರು. ಅಲ್ಲದೇ ಟೀಂ ಇಂಡಿಯಾ ವಿರುದ್ಧ 2000 ರನ್ಗಳ ಗಡಿದಾಟಿದರು.
ತಮ್ಮ ಈ ಇನ್ನಿಂಗ್ಸ್ನೊಂದಿಗೆ ಆಸೀಸ್ ಮಾಜಿ ಕ್ಯಾಪ್ಟನ್ ಸ್ಟೀವ್ ಸ್ಮಿತ್, ಕಾಂಗರೂ ಪಡೆಯ ಮಾಜಿ ನಾಯಕರುಗಳಾದ ರಿಕಿ ಪಾಂಟಿಂಗ್ ಮತ್ತು ಮೈಕಲ್ ಕ್ಲಾರ್ಕ್ ಅವರನ್ನೊಳಗೊಂಡ ಎಲೈಟ್ ಕ್ಲಬ್ ಸೇರಿದರು. ಟೀಂ ಇಂಡಿಯಾ ಪರ ಹೆಚ್ಚು ರನ್ಗಳಿಸಿದ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ಗಳ ಪೈಕಿ ರಿಕಿ ಪಾಂಟಿಂಗ್(2555) ಹಾಗೂ ಮೈಕಲ್ ಕ್ಲಾರ್ಕ್(2049) ರನ್ ಬಾರಿಸಿದ್ದು, ಈ ಸಾಲಿಗೆ ಸ್ಟೀವ್ ಸ್ಮಿತ್(2008) ಸೇರಿಕೊಂಡರು.
WTC Final, Team India, Australia, Steve Smith, Sports Karnataka