ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ ತಯಾರಿ ಮಾಡಿಕೊಂಡಿದ್ದು, ಜೂ.7ರಿಂದ ಇಂಗ್ಲೆಂಡ್ನ ಓವಲ್ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಮುಖಾಮುಖಿ ಆಗಲಿದೆ. ಹೈವೋಲ್ಟೇಕ್ ಪಂದ್ಯಕ್ಕೆ ಭಾರತದ ಆಟಗಾರರು ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ. ಉಭಯ ತಂಡಗಳು ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮದೇ ಪ್ರಾಬಲ್ಯ ಮೆರೆದಿದ್ದು, ಟೀಂ ಇಂಡಿಯಾದ ಸ್ಟಾರ್ ಬೌಲರ್ಗಳು ಆಸೀಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಟೀಂ ಇಂಡಿಯಾ ಪರ ಆಸ್ಟ್ರೇಲಿಯಾ ವಿರುದ್ಧ ಅತ್ಯಧಿಕ ವಿಕೆಟ್ಗಳನ್ನು ಪಡೆದಿರುವ ಬೌಲರ್ಗಳ ಸಾಲಿನಲ್ಲಿ ರವಿಚಂದ್ರನ್ ಅಶ್ವಿನ್ ಮೊದಲ ಸ್ಥಾನದಲ್ಲಿದ್ದಾರೆ. ಕಾಂಗರೂಗಳ ವಿರುದ್ಧ ಈವರೆಗೂ 22 ಟೆಸ್ಟ್ಗಳನ್ನ ಆಡಿರುವ ಅಶ್ವಿನ್, 114 ವಿಕೆಟ್ಗಳನ್ನ ಪಡೆದು ಮಿಂಚಿದ್ದಾರೆ. ಭಾರತ ತಂಡದ ಪ್ರಮುಖ ಸ್ಪಿನ್ ಅಸ್ತ್ರವಾಗಿರುವ ʼಕೇರಂ ಬಾಲ್ ಸ್ಪೆಷಲಿಸ್ಟ್ʼ ಇದೀಗ ಮತ್ತೊಮ್ಮೆ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಆಸೀಸ್ ಬ್ಯಾಟರ್ಗಳಿಗೆ ಕಡಿವಾಣ ಹಾಕಲು ಸಜ್ಜಾಗಿದ್ದಾರೆ.
ಅಶ್ವಿನ್ ನಂತರದಲ್ಲಿ ಹೆಚ್ಚು ವಿಕೆಟ್ ಪಡೆದಿರುವ ಬೌಲರ್ಗಳ ಲಿಸ್ಟ್ನಲ್ಲಿ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಇದ್ದಾರೆ. ಆಸೀಸ್ ವಿರುದ್ಧ ಆಡಿರುವ 20 ಟೆಸ್ಟ್ ಪಂದ್ಯಗಳಲ್ಲಿ 111 ವಿಕೆಟ್ ಪಡೆದ ಸಾಧನೆ ಹೊಂದಿದ್ದಾರೆ. ಇದಾದ ನಂತರದ ಸ್ಥಾನದಲ್ಲಿ ʼಟರ್ಬನೇಟರ್ʼ ಖ್ಯಾತಿಯ ಹರ್ಭಜನ್ ಸಿಂಗ್ ಕಾಣಿಸಿಕೊಂಡಿದ್ದು, 18 ಟೆಸ್ಟ್ಗಳಲ್ಲಿ 95 ವಿಕೆಟ್ಗಳನ್ನ ಪಡೆದಿದ್ದಾರೆ.
ಈ ಮೂವರು ಪ್ರಮುಖ ಸ್ಪಿನ್ನರ್ಗಳ ಜೊತೆಗೆ ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಸಹ ಆಸೀಸ್ ವಿರುದ್ಧ ಅಧಿಕ ವಿಕೆಟ್ ಪಡೆದ ಬೌಲರ್ಗಳ ಸಾಲಿನಲ್ಲಿ ಕಾಣಿಸಿಕೊಂಡಿದ್ದು, 16 ಟೆಸ್ಟ್ನಲ್ಲಿ 85 ವಿಕೆಟ್ಗಳನ್ನ ಕಬಳಿಸಿದ್ದಾರೆ. ಸ್ಪಿನ್ನರ್ಗಳ ಜೊತೆಗೆ ಹೆಚ್ಚು ವಿಕೆಟ್ಗಳನ್ನ ಪಡೆದಿರುವ ವೇಗದ ಬೌಲರ್ ಆಗಿರುವ ಮಾಜಿ ಕ್ರಿಕೆಟಿಗ ಕಪಿಲ್ ದೇವ್, 20 ಪಂದ್ಯಗಳಲ್ಲಿ 79 ವಿಕೆಟ್ ಪಡೆದಿದ್ದರೆ. ಮತ್ತೋರ್ವ ಮಾಜಿ ಕ್ರಿಕೆಟಿಗ ಜಹೀರ್ ಖಾನ್ 19 ಟೆಸ್ಟ್ನಲ್ಲಿ 61 ವಿಕೆಟ್ ಪಡೆದಿದ್ದಾರೆ. ಉಳಿದಂತೆ ವೇಗದ ಬೌಲರ್ಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಮಾಜಿ ಕ್ರಿಕೆಟರ್ ಇಶಾಂತ್ ಶರ್ಮ 25 ಟೆಸ್ಟ್ನಲ್ಲಿ 59 ವಿಕೆಟ್ ಪಡೆದಿದ್ದಾರೆ.
WTC Final, Team India, Australia Cricket News, Ravichandran Ashwin, Sports Karnataka