ಆಸ್ಟ್ರೇಲಿಯಾ ವಿರುದ್ಧ ಜೂ.7ರಿಂದ ಆರಂಭವಾಗಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯಕ್ಕೆ ಭಾರತ ಸಜ್ಜಾಗಿದ್ದು, ತಂಡದ ಸ್ಟಾರ್ ಬ್ಯಾಟರ್ ಚೇತೇಶ್ವರ್ ಪುಜಾರ ಸಹ ಫೈನಲ್ ಪಂದ್ಯಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಟೀಂ ಇಂಡಿಯಾದ ಟೆಸ್ಟ್ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿರುವ ಪುಜಾರ, ಆಂಗ್ಲರ ನಾಡಿನಲ್ಲಿ ನಡೆದ ಎರಡನೇ ಡಿವಿಜನ್ ಕೌಂಟಿ ಚಾಂಪಿಯನ್ಷಿಪ್‌ನಲ್ಲಿ ದಾಖಲೆಯ ಪ್ರದರ್ಶನ ನೀಡಿದ್ದರು. ಇದೀಗ ಆಸೀಸ್ ವಿರುದ್ಧ ನಡೆಯುವ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಪುಜಾರ ಸಹ ಉತ್ತಮ ರೀತಿಯಲ್ಲಿ ತಯಾರಿ ಮಾಡಿಕೊಂಡಿದ್ದು, ಆಸ್ಟ್ರೇಲಿಯಾ ತಂದಡ ಕಠಿಣ ಚಾಲೆಂಜ್ ಎದುರಿಸಲು ಕಾಯುತ್ತಿದ್ದಾರೆ.
ಟೀಂ ಇಂಡಿಯಾದ ಅನುಭವಿ ಬ್ಯಾಟರ್ ಆಗಿರುವ ಪುಜಾರ, ಇಂಗ್ಲೆಂಡ್ ನೆಲದಲ್ಲಿ ಈ ಹಿಂದೆಯೂ ಸಾಕಷ್ಟು ಪಂದ್ಯಗಳನ್ನಾಡಿರುವ ಅನುಭವ ಹೊಂದಿದ್ದಾರೆ. ಆಂಗ್ಲರ ನಾಡಿನಲ್ಲಿ ಈವರೆಗೂ 15 ಟೆಸ್ಟ್ ಪಂದ್ಯಗಳನ್ನ ಆಡಿರುವ ಪುಜಾರ, 30 ಇನ್ನಿಂಗ್ಸ್‌ಗಳಲ್ಲಿ 29.60 ಬ್ಯಾಟಿಂಗ್ ಸರಾಸರಿ ಮೂಲಕ 829 ರನ್‌ಗಳಿಸಿದ್ದಾರೆ. ಈವರೆಗೂ 6 ಅರ್ಧಶತಕ ಬಾರಿಸಿರುವ ʼಟೆಸ್ಟ್ ಸ್ಪೆಷಲಿಸ್ಟ್ʼ 2018ರ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಏಕೈಕ ಶತಕ ಬಾರಿಸಿದ್ದಾರೆ. ಕಳೆದ ಐದು ಇನ್ನಿಂಗ್ಸ್‌ಗಳಲ್ಲಿ ಮೂರು ಅರ್ಧಶತಕಗಳನ್ನ ದಾಖಲಿಸಿದ್ದಾರೆ.
ಇನ್ನೂ ಕೌಂಟಿ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಚೇತೇಶ್ವರ್ ಪುಜಾರ, ಪ್ರಸ್ತುತ ನಡೆಯುತ್ತಿರುವ ಎರಡನೇ ಡಿವಿಜನ್ ಕೌಂಟಿ ಚಾಂಪಿಯನ್ಷಿಪ್‌ನಲ್ಲಿ 68.12ರ ಬ್ಯಾಟಿಂಗ್ ಸರಾಸರಿಯೊಂದಿಗೆ 545 ರನ್‌ಗಳಿಸಿದ್ದರು. ಹೀಗಾಗಿ ಭರ್ಜರಿ ಫಾರ್ಮ್‌ನಲ್ಲಿರುವ ಪುಜಾರ, ಆಸೀಸ್ ವಿರುದ್ಧ ನಡೆಯಲಿರುವ ಫೈನಲ್ ಪಂದ್ಯದಲ್ಲೂ ಇದೇ ಫಾರ್ಮ್ ಮುಂದುವರಿಸುವ ಆತ್ಮವಿಶ್ವಾಸ ಹೊಂದಿದ್ದಾರೆ. ಟೀಂ ಇಂಡಿಯಾದ ಟೆಸ್ಟ್ ತಂಡದ ಪ್ರಮುಖ ಬ್ಯಾಟರ್ ಆಗಿರುವ ಪುಜಾರ, ಈವರೆಗೂ 102 ಟೆಸ್ಟ್ ಪಂದ್ಯಗಳನ್ನಾಡಿದ್ದು, 43.88ರ ಸರಾಸರಿಯೊಂದಿಗೆ 7154 ರನ್‌ಗಳಿಸಿದ್ದಾರೆ. ಇದರಲ್ಲಿ 19 ಶತಕ ಹಾಗೂ 35 ಅರ್ಧಶತಕಗಳು ಒಳಗೊಂಡಿದೆ.
WTC Final, Team India, Australia, Cheteshwar Pujara, Sports Karnataka,