ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಕೌಂಟ್ಡೌನ್ ಶುರುವಾಗಿದ್ದು, ಈ ನಡುವೆ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಆಸ್ಟ್ರೇಲಿಯಾ ಎಂದು ಪಾಕಿಸ್ತಾನ ತಂಡದ ಮಾಜಿ ಆಟಗಾರ ವಾಸಿಂ ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ನ ಓವಲ್ನಲ್ಲಿ ನಡೆಯುವ ಫೈನಲ್ ಪಂದ್ಯಕ್ಕಾಗಿ ಉಭಯ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿವೆ. ಈ ನಡುವೆ ಫೈನಲ್ ಪಂದ್ಯದ ಬಗ್ಗೆ ಮಾತನಾಡಿರುವ ವಾಸಿಂ ಅಕ್ರಮ್, ಓವಲ್ನಲ್ಲಿನ ಪಿಚ್ ವೇಗಿಗಳಿಗೆ ಹೆಚ್ಚು ಸಹಕಾರಿ ಆಗಲಿದ್ದು, ಪಿಚ್ನ ಮೇಲ್ಭಾಗ ವೇಗದ ಬೌಲರ್ಗಳಿಗೆ ಹೆಚ್ಚು ಬೌನ್ಸ್ ನೀಡುತ್ತದೆ. ಇದರಿಂದಾಗಿ ಭಾರತದ ಬ್ಯಾಟರ್ಗಳಿಗೆ ಸ್ವಲ್ಪಮಟ್ಟಿಗೆ ತೊಂದರೆಯಾಗಬಹುದು ಎಂದು ವಾಸಿಂ ಅಕ್ರಮ್ ಹೇಳಿದ್ದಾರೆ.
‘ಸುಲ್ತಾನ್ ಆಫ್ ಸ್ವಿಂಗ್’ ಎಂದು ಜನಪ್ರಿಯವಾಗಿರುವ ವಾಸಿಂ ಅಕ್ರಮ್ ಅವರ ಪ್ರಕಾರ, ಕೂಕಬುರ್ರಾಕ್ಕಿಂತ ಡ್ಯೂಕ್ ಬಾಲ್ ಹೆಚ್ಚು ಸ್ವಿಂಗ್ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ವಿಂಗ್ ಬಾಲ್ಗಳ ವಿರುದ್ಧ ಭಾರತೀಯ ಬ್ಯಾಟರ್ಗಳು ಸಾಕಷ್ಟು ಹೆಣಗಾಡಿದ್ದಾರೆ ಮತ್ತು ಆದ್ದರಿಂದ ರೋಹಿತ್ ಶರ್ಮಾ ನೇತೃತ್ವದ ತಂಡಕ್ಕೆ ಆಸೀಸ್ ತಂಡದ ವೇಗದ ಬೌಲರ್ಗಳನ್ನ ಎದುರಿಸುವುದು ಅಷ್ಟು ಸುಲಭವಲ್ಲ ಎಂದು ಅಕ್ರಮ್ ಹೇಳಿದ್ದಾರೆ.
ಅಲ್ಲದೇ ಓವಲ್ನಲ್ಲಿ, ನೀವು ಆಗಸ್ಟ್ ಕೊನೆಯ ವಾರದಲ್ಲಿ ಅಥವಾ ಸೆಪ್ಟೆಂಬರ್ ಮೊದಲ ಅಥವಾ 2ನೇ ವಾರದಲ್ಲಿ ಪಿಚ್ ಒಣಗಿರುವಾಗ ಟೆಸ್ಟ್ ಪಂದ್ಯವನ್ನು ಆಡಲಾಗುತ್ತದೆ. ಆದರೆ ಈ ಬಾರಿ ತಾಜಾ ಪಿಚ್ ಆಗಿದ್ದು, ಹೆಚ್ಚು ಬೌನ್ಸ್ ಇರುತ್ತದೆ. ಡ್ಯೂಕ್ ಬಾಲ್ಗಳು ಕೂಕಬುರಾ ಬಾಲ್ಗಿಂತಲೂ ಹೆಚ್ಚು ಗಟ್ಟಿಯಾಗಿರುವ ಕಾರಣ ಹೆಚ್ಚು ಸಮಯದವರೆಗೆ ಸ್ವಿಂಗ್ ಆಗುತ್ತದೆ. ಈ ಎಲ್ಲಾ ಕಾರಣದಿಂದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲ್ಲುವ ನೆಚ್ಚಿನ ತಂಡವಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಐಸಿಸಿಯ ‘ಆಫ್ಟರ್ನೂನ್ ವಿತ್ ಟೆಸ್ಟ್ ಲೆಜೆಂಡ್ಸ್’ ಕಾರ್ಯಕ್ರಮದಲ್ಲಿ ಅಕ್ರಮ್ ಹೇಳಿದರು.
WTC Final, Team India, Australia, Wasim Akram, Sports Karnataka,