ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ಕನ್ನಿಕ ಅಹುಜಾ(46) ಹಾಗೂ ರಿಜಾ ಘೋಷ್(31*) ಅವರುಗಳ ಜವಾಬ್ದಾರಿಯ ಬ್ಯಾಟಿಂಗ್ ನೆರವಿನಿಂದ ಯುಪಿ ವಾರಿಯರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ವಿಕೆಟ್ಗಳ ಗೆಲುವು ಸಾಧಿಸಿದೆ. ಆ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್ 2023ರಲ್ಲಿ ಮೊದಲ ಗೆಲುವಿನ ನಗೆಬೀರಿತು.
ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ 19.3 ಓವರ್ಗಳಲ್ಲಿ 135 ರನ್ಗಳಿಗೆ ಆಲೌಟ್ ಆಯಿತು. ಈ ಟಾರ್ಗೆಟ್ ಚೇಸ್ ಮಾಡಿದ ಆರ್ಸಿಬಿ 18 ಓವರ್ಗಳಲ್ಲಿ 136/5 ರನ್ಗಳಿಸಿ 5 ವಿಕೆಟ್ಗಳ ಗೆಲುವು ಸಾಧಿಸಿತು. ಆರ್ಸಿಬಿ ಪರ ಅಹುಜಾ(46) ಹಾಗೂ ಘೋಷ್(31*) ಉತ್ತಮ ಬ್ಯಾಟಿಂಗ್ನಿಂದ ತಂಡಕ್ಕೆ ಆಸರೆಯಾದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಯುಪಿ ವಾರಿಯರ್ಸ್ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಇನ್ನಿಂಗ್ಸ್ ಆರಂಭಿಸಿದ ಹೀಲಿ(1) ಹಾಗೂ ದೇವಿಕಾ ವೈದ್ಯ(0) ಮೊದಲ ಓವರ್ನಲ್ಲೇ ಔಟಾಗಿ ನಿರಾಸೆ ಮೂಡಿಸಿದರು. ಇವರ ಬೆನ್ನಲ್ಲೇ ತಾಲಿಯ ಮೆಕ್ಗ್ರಾತ್(2) ಸಹ ವಿಕೆಟ್ ಒಪ್ಪಿಸಿ ಹೊರ ನಡೆದರು. ಪರಿಣಾಮ ಯುಪಿ 5 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಜೊತೆಯಾದ ಕಿರಣ್ ನವಗಿರೆ(22) ಹಾಗೂ ಗ್ರೇಸ್ ಹ್ಯಾರಿಸ್(46) ತಂಡಕ್ಕೆ ಸ್ವಲ್ಪಮಟ್ಟಿನ ಚೇತರಿಕೆ ನೀಡಿದರು.
ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮ(22) ಹಾಗೂ ಎಕ್ಲೆಸ್ಟೋನ್(12) ರನ್ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳು ಎರಡಂಕ್ಕಿಯ ಮೊತ್ತ ಕಲೆಹಾಕುವಲ್ಲಿ ವಿಫಲರಾದರು. ಹೀಗಾಗಿ ಯುಪಿ ವಾರಿಯರ್ಸ್ 19.3 ಓವರ್ಗಳಲ್ಲಿ 135ಕ್ಕೆ ಆಲೌಟ್ ಆಯಿತು. ಆರ್ಸಿಬಿ ಪರ ಎಲ್ಲಿಸ್ ಪೆರ್ರಿ 3, ಶೋಭನ ಹಾಗೂ ಡಿವೈನ್ 2, ಮೇಗನ್ ಶುಟ್ ಮತ್ತು ಶ್ರೇಯಾಂಕ ಪಾಟೀಲ್ ತಲಾ 1 ವಿಕೆಟ್ ಪಡೆದರು.
ಯುಪಿ ವಾರಿಯರ್ಸ್ ನೀಡಿದ ಸಾಧಾರಣ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ ಸಹ ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಾಯಕಿ ಸ್ಮೃತಿ ಮಂದಾನ(0) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದರೆ. ಸೋಫಿ ಡಿವೈನ್(14) ಹಾಗೂ ಎಲ್ಲಿಸ್ ಪೆರ್ರಿ(10) ಸಹ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಂದ ಹೀದರ್ ನೈಟ್(24), ಕನ್ನಿಕ ಅಹುಜಾ(46) ಮತ್ತು ರಿಚಾ ಘೋಷ್(31*) ಜವಾಬ್ದಾರಿಯ ಆಟವಾಡುವ ಮೂಲಕ ತಂಡಕ್ಕೆ ಮೊದಲ ಗೆಲುವು ತಂದುಕೊಟ್ಟರು. ಯುಪಿ ಪರವಾಗಿ ದೀಪ್ತಿ ಶರ್ಮ 2, ವೈದ್ಯ, ಎಕ್ಲೆಸ್ಟೋನ್ ಹಾಗೂ ಹ್ಯಾರಿಸ್ ತಲಾ 1 ವಿಕೆಟ್ ಪಡೆದುಕೊಂಡರು. ಉತ್ತಮ ಬ್ಯಾಟಿಂಗ್ನಿಂದ ಆರ್ಸಿಬಿ ಗೆಲುವಿನಲ್ಲಿ ಮಿಂಚಿದ ಕನ್ನಿಕ ಅಹುಜಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
WPL 2023, RCB, UP Warriorz, Royal Challengers Bangalore, Women’s Premier League